ಬೆಂಗಳೂರು: ಒಂದರಿಂದ 9ನೇ ತರಗತಿಗೆ ಮೇ ಅಂತ್ಯಕ್ಕೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಜೂನ್ 2 ನೇ ವಾರ ಫಲಿತಾಂಶ ಪ್ರಕಟಿಸಲಾಗುವುದು.
2020 -21ನೇ ಶೈಕ್ಷಣಿಕ ಸಾಲಿನ ಅವಧಿ ಬದಲಾದ ಹಿನ್ನೆಲೆಯಲ್ಲಿ ಮೇ ಅಂತ್ಯಕ್ಕೆ ವಾರ್ಷಿಕ ಪರೀಕ್ಷೆ ನಡೆಸಲಾಗುವುದು. ಪ್ರತಿವರ್ಷ ಏಪ್ರಿಲ್ 14 ರಂದು ಫಲಿತಾಂಶ ಪ್ರಕಟಿಸಲಾಗುತ್ತಿದ್ದು, ಈ ಬಾರಿ ಫಲಿತಾಂಶವನ್ನು ಜೂನ್ ಎರಡನೇ ವಾರ ಪ್ರಕಟಿಸಲಾಗುವುದು. ಅಲ್ಲದೇ, ಪರೀಕ್ಷೆ ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ.
ಆನ್ಲೈನ್ ತರಗತಿ, ವಿದ್ಯಾಗಮ ಹಾಗೂ ಸಂವೇದ ಪಾಠಗಳ ಅವಧಿಯಲ್ಲಿ ಗಳಿಸಿದ ಕಲಿಕಾಂಶಗಳನ್ನು ಆಧರಿಸಿ ಶಾಲೆ ಹಂತದಲ್ಲಿ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಪ್ರತಿವರ್ಷ ಒಂದರಿಂದ 9ನೇ ತರಗತಿಯ ವರೆಗೆ 4 ಕಿರುಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ವರ್ಷ ಎರಡು ಕಿರುಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ ಮಾತ್ರ ನಡೆಸಲಾಗುವುದು. ಒಂದರಿಂದ ಐದನೇ ತರಗತಿ ಮಕ್ಕಳಿಗೆ ಗುಂಪುಚಟುವಟಿಕೆ ಹೊರತುಪಡಿಸಿ ಒಂದು ಕಿರುಪರೀಕ್ಷೆ ಮತ್ತು ವಾರ್ಷಿಕ ಪರೀಕ್ಷೆ ಮಾತ್ರ ನಡೆಯಲಿದೆ. ಮೇ ಕೊನೆಯ ವಾರದಿಂದ ಜೂನ್ ಮೊದಲ ವಾರದ ವರೆಗೆ ವಾರ್ಷಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಜೂನ್ ಎರಡನೇ ವಾರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.