
ಖಾರ್ಗೋನ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ರಾಮ ನವಮಿ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದ ವೇಳೆ ಉಂಟಾದ ಹಾನಿಯ ನಷ್ಟ ತುಂಬಿಕೊಡುವಂತೆ 12 ವರ್ಷದ ಬಾಲಕನಿಗೆ 2.9 ಲಕ್ಷ ರೂ. ದಂಡ ವಿಧಿಸಿ ರಾಜ್ಯ ಹಕ್ಕು ನ್ಯಾಯಮಂಡಳಿ ಆದೇಶಿಸಿದೆ. ಈತ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.
ಏಪ್ರಿಲ್ 10ರಂದು ರಾಮನವಮಿ ಮೆರವಣಿಗೆ ತೆರಳುತ್ತಿದ್ದ ವೇಳೆ ಗುಂಪೊಂದು ದಾಂಧಲೆ ನಡೆಸಿತ್ತು. ಈ ಸಂದರ್ಭದಲ್ಲಿ ತಮ್ಮ ಆಸ್ತಿಗೆ ಹಾನಿಯಾಗಿದೆ ಎಂದು ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಇದರಲ್ಲಿ 12 ವರ್ಷದ ಬಾಲಕನ ಹೆಸರನ್ನೂ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಬಾಲಕನಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ದಂಡ ವಿಧಿಸಲಾಗಿದೆ.
ಕಾರ್ಮಿಕನಾಗಿರುವ ಬಾಲಕನ ತಂದೆ ಕಲು ಖಾನ್ಗೂ 4.8 ಲಕ್ಷ ರೂ. ದಂಡ ವಿಧಿಸಿ ನೋಟಿಸ್ ಜಾರಿಗೊಳಿಸಿದ್ದು, ಈ ಇಬ್ಬರೂ ಈಗ ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆ.
ರಾಮನವಮಿಯ ಘರ್ಷಣೆ ಬಳಿಕ ರಾಜ್ಯ ನ್ಯಾಯಮಂಡಳಿಗೆ 343 ದೂರುಗಳು ಬಂದಿವೆ. ಅದರಲ್ಲಿ ಅದು ಕೇವಲ 34 ಅನ್ನು ಸ್ವೀಕರಿಸಿದೆ. ಇದುವರೆಗೆ, ಇದು ಆರು ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಇದರಲ್ಲಿ ನಾಲ್ಕು ಮಂದಿ ಹಿಂದೂಗಳು ಮತ್ತು ಇಬ್ಬರು ಮುಸ್ಲಿಮರು ಸೇರಿದ್ದಾರೆ. 50 ಮಂದಿಯಿಂದ 7.46 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ.
ಸಾರ್ವಜನಿಕ ಆಸ್ತಿಗಳಿಗೆ ಹಾನಿ ತಡೆ ಮತ್ತು ವಸೂಲಾತಿ ಕಾಯ್ದೆ ಅಡಿ ನೋಟಿಸ್ ಜಾರಿ ಮಾಡಲಾಗಿದೆ. ಪ್ರತಿಭಟನೆ, ಮುಷ್ಕರ ಅಥವಾ ಯಾವುದೇ ಸ್ವರೂಪದ ಹಿಂಸಾಚಾರದ ವೇಳೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಉಂಟಾಗುವ ಹಾನಿಯ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲು ಈ ಕಾಯ್ದೆ ಸರ್ಕಾರಕ್ಕೆ ಅವಕಾಶ ನೀಡುತ್ತದೆ.