ಅನಾರೋಗ್ಯಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿಗೆ ತರಗತಿಯಲ್ಲಿ ಕುಳಿತುಕೊಳ್ಳಲೇಬೇಕೆಂದು ಒತ್ತಾಯಿಸಲಾಗಿದ್ದು ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದ ಕಾರಣ ಆಕೆ ಪ್ರಾಣ ಕಳೆದುಕೊಂಡ ಘಟನೆಯೊಂದು ಫರಿದಾಬಾದ್ನಲ್ಲಿ ಸಂಭವಿಸಿದೆ.
ವರದಿಗಳ ಪ್ರಕಾರ 11 ವರ್ಷದ ಬಾಲಕಿಯು ತರಗತಿಯ ಸಮಯದಲ್ಲಿ ಹಾಗೂ ಬಸ್ನಲ್ಲಿ ಮನೆಗೆ ಹಿಂತಿರುಗಬೇಕಿದ್ದ ಸಂದರ್ಭದಲ್ಲಿ ವಾಂತಿ ಮಾಡಿಕೊಂಡಿದ್ದಳು ಎನ್ನಲಾಗಿದೆ. ಬುಧವಾರ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಆಕೆ ಗುರುವಾರ ಮೃತಪಟ್ಟಿದ್ದಾಳೆ.
ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಬಗ್ಗೆ ಶಾಲಾ ಶಿಕ್ಷಕರು ಮಾಹಿತಿ ನೀಡದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದರು. ಬಾಲಕಿ ಅಸ್ವಸ್ಥಳಾಗಿದ್ದರೂ ಸಹ ಆಕೆಯನ್ನು ಗಣಿತ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ತರಗತಿಯಲ್ಲೇ ಕುಳಿತುಕೊಳ್ಳುವಂತೆ ಒತ್ತಾಯಿಸಲಾಗಿತ್ತು.
ಆಕೆಗೆ ವಾಕರಿಕೆಯಾಗುತ್ತಿದೆ ಹಾಗೂ ಆಕೆ ವಿಪರೀತ ಬೆವರುತ್ತಿದ್ದಾಳೆ ಎಂದು ಮೃತಪಟ್ಟ ಬಾಲಕಿಯ ಸ್ನೇಹಿತೆ ಶಿಕ್ಷಕರಿಗೆ ಮಾಹಿತಿ ನೀಡಿದ್ದಾಳೆ. ಆದರೂ ಶಿಕ್ಷಕರು ಆಕೆಗೆ ಪರಿಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದ್ದರು ಎನ್ನಲಾಗಿದೆ.
ಮನೆಗೆ ಹೋಗಿ ಬಾಲಕಿ ವಾಂತಿ ಮಾಡಿಕೊಂಡಾಗ ಇದು ಮೊದಲನೇ ಬಾರಿಗೆ ಅವಳು ವಾಂತಿ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಭಾವಿಸಿದ್ದರು. ಆಕೆ ಶಾಲೆ ಹಾಗೂ ಬಸ್ನಲ್ಲಿ ವಾಂತಿ ಮಾಡಿಕೊಂಡ ವಿಚಾರ ಪೋಷಕರಿಗೆ ತಿಳಿದಿರಲಿಲ್ಲ. ಸಕಾಲದಲ್ಲಿ ಚಿಕಿತ್ಸೆ ನೀಡಿದ್ದರೆ ಆಕೆಯನ್ನು ಉಳಿಸಬಹುದಿತ್ತು ಎಂದು ಪೋಷಕರು ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ನಿರ್ಜಲೀಕರಣದಿಂದ ಈ ಸಾವು ಸಂಭವಿಸಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.