ಐದನೇ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಬಾಲಕಿ ಆತ್ಮಹತ್ಯೆ ಶರಣಾದ ಶಾಕಿಂಗ್ ಘಟನೆಯೊಂದು ಗುಜರಾತ್ನಲ್ಲಿ ವರದಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬಾಲಕಿ ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ.
ಸಾವಧಾನ್ ಇಂಡಿಯಾ, ಕ್ರೈಂ ಪ್ಯಾಟ್ರೋಲ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಅತಿಯಾಗಿ ನೋಡುತ್ತಿದ್ದ ಬಾಲಕಿ ಈ ರೀತಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಘಟನೆ ನಡೆಯುವ ದಿನದಂದು ಬಾಲಕಿಯ ಪೋಷಕರು ಹಾಗೂ ಇತರೆ ಕುಟುಂಬಸ್ಥರು ಕಾರ್ಯಕ್ರಮವೊಂದರ ನಿಮಿತ್ತ ಮನೆಯಿಂದ ಹೊರಗೆ ತೆರಳಿದ್ದರು. ಬಾಲಕಿಯನ್ನೂ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು ಮುಂದಾದ ವೇಳೆಯಲ್ಲಿ ಆಕೆ ತಾನು ಬರೋದಿಲ್ಲ ಎಂದು ನಿರಾಕರಿಸಿದ್ದಾಳೆ.
ಮಧ್ಯಾಹ್ನ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಎಷ್ಟೇ ಬಾಗಿಲು ಬಡಿದರೂ ಬಾಲಕಿ ಬಾಗಿಲು ತೆರೆದಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಮನೆಯ ಹಿಂಬದಿ ಕಿಟಕಿ ತೆರೆದು ನೋಡಿದ ವೇಳೆಯಲ್ಲಿ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಇಷ್ಟು ಪುಟ್ಟ ಬಾಲಕಿಗೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಏಕೆ ಬಂತು ಎಂದು ಪೊಲೀಸರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತನಿಖೆ ವೇಳೆ ಮೃತ ಬಾಲಕಿ ಕ್ರೈಮ್ ಪ್ಯಾಟ್ರೋಲ್ ಹಾಗೂ ಸಾವಧಾನ್ ಇಂಡಿಯಾದಂತಹ ಕಾರ್ಯಕ್ರಮಗಳನ್ನು ಅತಿಯಾಗಿ ನೋಡುತ್ತಿದ್ದಳು ಎಂದು ತಿಳಿದುಬಂದಿದೆ. ಬಹುಶಃ ಈ ಶೋ ಮೂಲಕವೇ ನೇಣು ಬಿಗಿದುಕೊಳ್ಳೋದನ್ನು ಕಲಿತಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಬಾಲಕಿ ಆತ್ಮಹತ್ಯೆಗೆ ಇನ್ನು ನಿಖರ ಕಾರಣ ತಿಳಿದುಬಂದಿಲ್ಲ.