ಪಾರ್ಟಿಗೆ ತೆರಳಲು ಉಚಿತ ಪಾಸ್ ನೀಡಲು ನಿರಾಕರಿಸಿದ ಕಾರಣಕ್ಕೆ ಗುರುಗ್ರಾಮ್ನಲ್ಲಿ ಖಾಸಗಿ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ .
ಈ ವಿಚಾರವಾಗಿ ಮಾತನಾಡಿದ ಸಹಾಯಕ ಆಯುಕ್ತ ಅಮನ್ ಯಾದವ್, ಸಂತ್ರಸ್ತ ಹಾಗೂ ಆತನ ಸಹಪಾಠಿಗಳು ಪಾರ್ಟಿಯನ್ನು ಆಯೋಜಿಸಿದ್ದರು. ಅಲ್ಲದೇ ಎಲ್ಲಾ ವಿದ್ಯಾರ್ಥಿಗಳು ಈ ಪಾರ್ಟಿಯನ್ನು ಆಯೋಜಿಸಲು ದೇಣಿಗೆ ನೀಡಬೇಕೆಂದು ಹೇಳಲಾಗಿತ್ತು.
ಶಂಕಿತರಲ್ಲಿ ಓರ್ವ, ಸಂತ್ರಸ್ತನಿಗೆ ಕರೆ ಮಾಡಿ ಐದು ಉಚಿತ ಪಾಸ್ಗಳನ್ನು ನೀಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಆತ ಒಪ್ಪಿರಲಿಲ್ಲ. ಇದಾದ ಬಳಿಕ ಪಾರ್ಟಿ ಮಾಡುವ ಸ್ಥಳವನ್ನು ಬದಲಾಯಿಸಲಾಗಿತ್ತು ಎಂದು ಹೇಳಿದರು.
ಇದಾದ ಬಳಿಕ ಶಂಕಿತರು ವಿದ್ಯಾರ್ಥಿಯನ್ನು ಬಲವಂತವಾಗಿ ಕಾರು ಹತ್ತಿಸಿ ಘಾಟಾ ಗ್ರಾಮದ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸಂತ್ರಸ್ತ ವಿದ್ಯಾರ್ಥಿ ನೀಡಿರುವ ಮಾಹಿತಿಯ ಪ್ರಕಾರ ಆತನನ್ನು ಬಲವಂತವಾಗಿ ಕೋಣೆಯೊಂದರಲ್ಲಿ ಕೂರಿಸಲಾಯ್ತು. ಆ ಐವರು ತಮ್ಮಲ್ಲೇ ಚರ್ಚೆ ನಡೆಸುತ್ತಿದ್ದರು. ಈ ಸಮಯದಲ್ಲಿ ಆತ ತನ್ನ ಸಂಬಂಧಿಗೆ ಕರೆ ಮಾಡಿ ಮಾಹಿತಿ ನೀಡಿದ್ದ ಎನ್ನಲಾಗಿದೆ.