
ಭೋಪಾಲ್: ಮಧ್ಯ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಅಕ್ಕನೇ ತಂಗಿಗೆ ಮಾದಕದ್ರವ್ಯ ವ್ಯಸನಿಯಾಗಿ ಮಾಡಿ ವೇಶ್ಯಾವಾಟಿಕೆಗೆ ನೂಕಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಘಟನೆ ನಡೆದಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ಅತ್ಯಾಚಾರ ಮತ್ತು 506 ಕ್ರಿಮಿನಲ್ ಬೆದರಿಕೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಬಾಲಕಿಯ 20 ವರ್ಷದ ಸಹೋದರಿ, ಮತ್ತೊಬ್ಬ ವ್ಯಕ್ತಿ ಮತ್ತು ಆತನ ಇಬ್ಬರು ಮಕ್ಕಳು ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಭೋಪಾಲ್ ಉತ್ತರ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ಶ್ರೀವಾಸ್ತವ ಈ ಕುರಿತು ಮಾಹಿತಿ ನೀಡಿ, 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ವರ್ತನೆಯಲ್ಲಾದ ಬದಲಾವಣೆಯಿಂದ ಅನುಮಾನಗೊಂಡ ತಾಯಿ ಚೈಲ್ಡ್ ಲೈನ್ ಗೆ ಮಾಹಿತಿ ನೀಡಿದ್ದರು. ಬಾಲಕಿಯರ ಆಶ್ರಯ ತಾಣದಲ್ಲಿ ಒಂದು ತಿಂಗಳು ಸಲಹೆ ಪಡೆದುಕೊಂಡ ಸಂತ್ರಸ್ತೆ ಇತ್ತೀಚೆಗೆ ಕೌನ್ಸಿಲಿಂಗ್ ನಲ್ಲಿ ತನ್ನ ಸಹೋದರಿ ಮಾದಕ ದ್ರವ್ಯ ನೀಡಿ ವೇಶ್ಯಾವಾಟಿಕೆಗೆ ತಳ್ಳಿದ್ದ ಬಗ್ಗೆ ತಿಳಿಸಿದ್ದಾಳೆ.
ನಂತರ ಚೈಲ್ಡ್ ಲೈನ್ ಸಹಾಯದಿಂದ ತಾಯಿ ಗಾಂಧಿನಗರ ಠಾಣೆ ಪೊಲೀಸರಿಗೆ ಶನಿವಾರ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ಬಾಲಕಿ 13 ವರ್ಷದವಳಾಗಿದ್ದಾಗ ಮೊದಲ ಬಾರಿಗೆ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಇಂದೋರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಸಹೋದರಿ ಅಪರಿಚಿತ ಸ್ಥಳಕ್ಕೆ ಬಾಲಕಿ ಕರೆದೊಯ್ದು ನಂತರ ವ್ಯಕ್ತಿಯೊಂದಿಗೆ ಅವಳನ್ನು ಬಿಟ್ಟು ಹೋಗಿದ್ದಾಳೆ. ತಂಗಿಗೆ 2000 ರೂ. ಕೊಡುತ್ತಿದ್ದ ಆಕೆ ಹಲವಾರು ಸ್ಥಳಗಳಿಗೆ ಕರೆದೊಯ್ದಿದ್ದು, ಹಲವರು ಅವಳ ಮೇಲೆ ಅತ್ಯಾಚಾರವೆಸಗಿ ಹಣ ಕೊಟ್ಟಿದ್ದಾರೆ. ಈ ವಿಚಾರ ತಿಳಿದ ಆಕೆಯ ಸೋದರ ಸಂಬಂಧಿ ಕೂಡ ಅತ್ಯಾಚಾರವೆಸಗಿದ್ದಾನೆ. ಹುಡುಗಿ ನಡವಳಿಕೆಯಲ್ಲಿ ಬದಲಾವಣೆಯನ್ನು ಗಮನಿಸಿದ ತಾಯಿ ಚೈಲ್ಡ್ ಲೈನ್ ಸಂಪರ್ಕಿಸಿದ್ದು, ಕೌನ್ಸೆಲಿಂಗ್ ನಲ್ಲಿ ಬಾಲಕಿ ಎಲ್ಲಾ ವಿಚಾರವನ್ನು ತಿಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಮುಖೇಶ್ ಶ್ರೀವಾಸ್ತವ ತಿಳಿಸಿದ್ದಾರೆ.