ನವದೆಹಲಿ: ದಕ್ಷಿಣ ದೆಹಲಿಯಲ್ಲಿ 10 ನೇ ತರಗತಿ ಬಾಲಕಿಯನ್ನು ಅಪಹರಿಸಿ, ಕಾರ್ ನೊಳಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ದಕ್ಷಿಣ ದೆಹಲಿಯ ವಸಂತ ವಿಹಾರ್ ಮಾರುಕಟ್ಟೆಯಿಂದ 10 ನೇ ತರಗತಿಯ ಬಾಲಕಿಯನ್ನು ಅಪಹರಿಸಿ ನಂತರ ಮಹಿಪಾಲ್ ಪುರದಲ್ಲಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಜುಲೈ 6 ರಂದು ನೈರುತ್ಯ ದೆಹಲಿಯ ಮಹಿಪಾಲ್ ಪುರದಲ್ಲಿ ನಿಲ್ಲಿಸಿದ್ದ ಕಾರ್ ನೊಳಗೆ ಈ ಘಟನೆ ನಡೆದಿದ್ದು, ಅತ್ಯಾಚಾರ ಸಂತ್ರಸ್ತೆಯ ಸ್ನೇಹಿತ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು 23, 25 ಮತ್ತು 35 ವರ್ಷ ವಯಸ್ಸಿನವರಾಗಿದ್ದಾರೆ.
ಜುಲೈ 8 ರಂದು ಮುಂಜಾನೆ 4 ಗಂಟೆಯ ಸುಮಾರಿಗೆ ವಸಂತ ವಿಹಾರ್ ಪೊಲೀಸ್ ಠಾಣೆಗೆ ಆಸ್ಪತ್ರೆಯಿಂದ ಪಿಸಿಆರ್ ಕರೆ ಬಂದಿದೆ ಎಂದು ಉಪ ಪೊಲೀಸ್ ಆಯುಕ್ತ(ನೈಋತ್ಯ) ಮನೋಜ್ ಸಿ. ತಿಳಿಸಿದ್ದಾರೆ.
ಬಾಲಕಿಯನ್ನು ಮಹಿಳಾ ಕೌನ್ಸಿಲರ್ ಪರೀಕ್ಷಿಸಿದಾಗ, ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ತನಗೆ ಪರಿಚಯವಿರುವ ಇಬ್ಬರು ವ್ಯಕ್ತಿಗಳು ವಸಂತ ವಿಹಾರ್ ಮಾರುಕಟ್ಟೆಯ ಬಳಿ ಭೇಟಿಯಾದರು. ಜುಲೈ 6 ರಂದು ಸಂಜೆ ಅವರ ಜೊತೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿಯ ಕಾರ್ ನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ.
ನಾಲ್ವರೂ ಮಹಿಪಾಲ್ ಪುರಕ್ಕೆ ಹೋಗಿದ್ದು, ಅಲ್ಲಿ ಅವರು ಮದ್ಯ ಖರೀದಿಸಿ ಸೇವಿಸಿದ್ದಾರೆ. ನಂತರ ಅವರು ಏಕಾಂತ ಪ್ರದೇಶಕ್ಕೆ ತೆರಳಿದ್ದಾರೆ. ಕಾರ್ ನಲ್ಲಿ ಹುಡುಗಿಯ ಸ್ನೇಹಿತ ಅವಳನ್ನು ಚುಂಬಿಸಿದಾಗ ಇತರ ಇಬ್ಬರು ಅವಳ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಲ್ಲಿಂದ ಅವರೆಲ್ಲರೂ ಮನೆಗೆ ಹಿಂದಿರುಗುವ ಮೊದಲು ಗುರುಗ್ರಾಮ್ ಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ತನ್ನ ಸ್ನೇಹಿತ ಯಾವುದೇ ಅಪರಾಧ ಮಾಡಿಲ್ಲ. ತನ್ನನ್ನು ಉಳಿಸಲು ಪ್ರಯತ್ನಿಸುತ್ತಿದ್ದ ಎಂದು ಹುಡುಗಿ ತನ್ನ ಹೇಳಿಕೆಯಲ್ಲಿ ಹೇಳಿಕೊಂಡಿದ್ದಾಳೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯ್ದೆ ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ವಸಂತ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.