ವಿಶ್ವದಾದ್ಯಂತ ಕೊರೊನಾ ರೂಪಾಂತರ ಒಮಿಕ್ರಾನ್ ಪ್ರಕರಣಗಳು ಏರುತ್ತಿವೆ. ಭಾರತದಲ್ಲಿ ಒಮಿಕ್ರಾನ್ ಪ್ರಕರಣ ಮಂಗಳವಾರ 200 ಕ್ಕೆ ಏರಿದೆ. ಸುಮಾರು 77 ರೋಗಿಗಳು ಒಮಿಕ್ರಾನ್‌ನಿಂದ ಗುಣಮುಖರಾಗಿದ್ದಾರೆ. ಒಂದು ಕಡೆ ಒಮಿಕ್ರಾನ್ ವೇಗ ಪಡೆಯುತ್ತಿದ್ದರೆ ಇನ್ನೊಂದು ಕಡೆ ಡೆಲ್ಟಾ ರೂಪಾಂತರ ಭಯ ಹುಟ್ಟಿಸಿದೆ. ಒಮಿಕ್ರಾನ್, ಡೆಲ್ಟಾದಷ್ಟು ಅಪಾಯಕಾರಿಯಲ್ಲವೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ.
ಐಸಿಎಂಆರ್‌ನ ಹೆಚ್ಚುವರಿ ಮಹಾನಿರ್ದೇಶಕ ಡಾ. ಸಮೀರನ್ ಪಾಂಡಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಒಮಿಕ್ರಾನ್ ಗಿಂತ ಡೆಲ್ಟಾ ರೂಪಾಂತರ ಹೆಚ್ಚಾಗುತ್ತಿದೆ ಎಂದಿದ್ದಾರೆ. ಒಮಿಕ್ರಾನ್ ರೂಪಾಂತರ ವಿದೇಶಿ ಪ್ರಯಾಣಿಕರ ಮೂಲಕ ಹರಡಬಹುದು. ವಿಮಾನ ನಿಲ್ದಾಣದಲ್ಲಿ ಕಠಿಣ ನಿಯಮ ಜಾರಿಗೆ ತಂದಲ್ಲಿ ಅದನ್ನು ನಿಯಂತ್ರಿಸಬಹುದು ಎಂದವರು ಹೇಳಿದ್ದಾರೆ. ಆದ್ರೆ ಈಗಾಗಲೇ ಸಾಕಷ್ಟು ಸಾವಿಗೆ ಕಾರಣವಾಗಿರುವ ಡೆಲ್ಟಾ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದವರು ಹೇಳಿದ್ದಾರೆ.
ಭಾನುವಾರ ದೆಹಲಿಯಲ್ಲಿ ಕೊರೊನಾ ಪೀಡಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಆತ ಎರಡೂ ಡೋಸ್ ಲಸಿಕೆ ಪಡೆದಿದ್ದ ಎನ್ನಲಾಗಿದೆ. ಲಸಿಕೆ ಕೊರೊನಾ ಮೇಲೆ ಪ್ರಭಾವ ಬೀರುತ್ತಿಲ್ಲ ಎಂಬ ಆತಂಕ ಈಗ ಮನೆ ಮಾಡಿದೆ. ಹಾಗಾಗಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಜೊತೆ ಅನಗತ್ಯ ಓಡಾಟವನ್ನು ತಪ್ಪಿಸಬೇಕಿದೆ.