ಬೆಂಗಳೂರು: ಕಾಯಮಾತಿ ನಿರೀಕ್ಷೆಯಲ್ಲಿದ್ದ 40,000 ಪೌರಕಾರ್ಮಿಕರು ಮತ್ತೆ ಕಾಯುವಂತಾಗಿದೆ. ನೇಮಕಾತಿ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಹೊಸ ಸರ್ಕಾರ ಬಂದ ಆರು ತಿಂಗಳ ನಂತರ ಪೌರಕಾರ್ಮಿಕರ ನೇಮಕ ಕಾಯಮಾತಿಗೆ ಮರು ಚಾಲನೆ ನೀಡುವ ಸಾಧ್ಯತೆ ಇದೆ.
ಅನೇಕ ವರ್ಷಗಳಿಂದ ನೇಮಕಾತಿಗಾಗಿ ಕಾಯುತ್ತಿರುವ ಪೌರಕಾರ್ಮಿಕರಿಗೆ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಅಡ್ಡಿಯಾಗಿದೆ. ಬಿಬಿಎಂಪಿ ಸೇರಿದಂತೆ ರಾಜ್ಯದ 32 ಸ್ಥಳೀಯ ಸಂಸ್ಥೆಗಳಲ್ಲಿರುವ ಗುತ್ತಿಗೆ, ಹೊರಗುತ್ತಿಗೆ ಹಾಗೂ ನೇರ ವೇತನ ಪಾವತಿ ಅಡಿ ಕಾರ್ಯ ನಿರ್ವಹಿಸುವ 40 ಸಾವಿರಕ್ಕೂ ಅಧಿಕ ಪೌರಕಾರ್ಮಿಕರನ್ನು ಹಂತ ಹಂತವಾಗಿ ಕಾಯಂಗೊಳಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಅಂತೆಯೇ ಬಿಬಿಎಂಪಿ 14,980, ರಾಜ್ಯದ ವಿವಿಧ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ 7460 ಗುತ್ತಿಗೆ ಪೌರಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಬೇಕಿದೆ.
ಬಿಬಿಎಂಪಿಯ 3673 ಪೌರಕಾರ್ಮಿಕರ ಹುದ್ದೆಗಳು ಸೇರಿ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ 11,133 ಪೌರಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲು ನಿಯಮ ರೂಪಿಸಿ ನೇಮಕಾತಿ ನಿಯಮ ಸಡಿಲಗೊಳಿಸಿ ಅರ್ಜಿ ಆಹ್ವಾನಿಸಿ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಎಲ್ಲಾ ಪೌರಕಾರ್ಮಿಕರನ್ನು ಏಕಕಾಲಕ್ಕೆ ಕಾಯಂಗೊಳಿಸಬೇಕೆಂದು ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರು ಪಟ್ಟು ಹಿಡಿದ ಕಾರಣ 11,307 ಪೌರಕಾರ್ಮಿಕರ ಕಾಯಂಗೊಳಿಸಲು ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಈ ನಡುವೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ.
ವಿಧಾನಸಭೆ ಚುನಾವಣೆ ಮುಕ್ತಾಯವಾಗಿ ನೀತಿ ಸಂಹಿತೆ ಮುಗಿದು ಹೊಸ ಸರ್ಕಾರ ರಚನೆಯಾಗಿ ಇಲಾಖೆಗೆ ಸಚಿವರ ನೇಮಕವಾಗುವವರೆಗೆ ವಿಳಂಬವಾಗುವ ಸಾಧ್ಯತೆ ಇದೆ.