ಬೆಂಗಳೂರು ಸಿಟಿ ವಿಶ್ವವಿದ್ಯಾಲಯವು ಮಾರ್ಚ್ 17 ರಂದು ವಿವಿಧ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಈ ಫಲಿತಾಂಶ ಪೋಸ್ಟ್ ಮ್ಯಾನ್ ವೃತ್ತಿಯಲ್ಲಿದ್ದ ಒಬ್ಬರಿಗೆ ಬಹಳ ಖುಷಿ ತಂದಿದೆ. ಅವರೇ ಸಂಜಯ್.
ಸುಂಕದಕಟ್ಟೆ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ 25 ವರ್ಷದ ಸಂಜಯ್ ವಿವಿ ಪುರಂ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರೀಗ ಬೆಂಗಳೂರು ಸಿಟಿ ವಿಶ್ವವಿದ್ಯಾಲಯದಲ್ಲಿ ಎರಡನೇ ರ್ಯಾಂಕ್ (ಬಿಎ) ಪಡೆದಿದ್ದಾರೆ.
ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಪೋಸ್ಟ್ಮ್ಯಾನ್ ವೃತ್ತಿಯಲ್ಲಿ ತೊಡಗಿ ಸಂಜೆ 5.30ರಿಂದ ರಾತ್ರಿ 9.15ರ ವರೆಗೂ ಕಾಲೇಜು ತರಗತಿಗಳಿಗೆ ಹಾಜರಾಗುತ್ತಿದ್ದರು.
ಕುಕರಹಳ್ಳಿ ಮೂಲದ ಇವರು 2018 ರಲ್ಲಿ ಪಿಯು ಮುಗಿಸಿದ ನಂತರ ಅರ್ಥಶಾಸ್ತ್ರ, ಇತಿಹಾಸ ಮತ್ತು ಬಿಎ ಪ್ರವೇಶ ಪಡೆದಿದ್ದರು.
ನಾನು ಪೊಲಿಟಿಕಲ್ ಸೈನ್ಸ್ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಉತ್ಸುಕನಾಗಿದ್ದರಿಂದ ಬಿಎ ವ್ಯಾಸಂಗ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ತಮ್ಮ ಅಧ್ಯಯನ ಮುಂದುವರಿಸಲು ಪ್ರೋತ್ಸಾಹಿಸಿದ ಮತ್ತು ಪರೀಕ್ಷೆಯ ಸಮಯದಲ್ಲಿ ರಜೆ ನೀಡಿ ಸಹಕರಿಸಿದ ಸುಂಕದಕಟ್ಟೆ ಅಂಚೆ ಕಚೇರಿಯ ಹಿರಿಯ ಸಹೋದ್ಯೋಗಿಗಳಿಗೆ ಸಂಜಯ್ ಕೃತಜ್ಞತೆ ಸಲ್ಲಿಸಿದ್ದಾರೆ.
ಮುಂದೆ ಅವರು ಇಲಾಖಾ ಪರೀಕ್ಷೆಗಳಿಗೆ ಮಾತ್ರವಲ್ಲದೆ ಕೆಪಿಎಸ್ಸಿಯ ಸ್ಪರ್ಧಾತ್ಮಕ ಪರೀಕ್ಷೆಗೂ ಹಾಜರಾಗಲು ಯೋಚಿಸಿದ್ದಾರೆ.