ನಾಗಾಲ್ಯಾಂಡ್‌ನ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ಇಂಟರ್ನೆಟ್ ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ನೆಟ್ಟಿಗರ ಮನಮುಟ್ಟಿದೆ.
ಅವರು ಇತ್ತೀಚೆಗೆ ಭಾರೀ ಚಂಡಮಾರುತದ ನಡುವೆ ತನ್ನ ಅಂಗಡಿಯನ್ನು ರಕ್ಷಿಸುವ ಚಿಕ್ಕ ಹುಡುಗನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಮನಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು ಬಾಲಕನ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಚಂಡಮಾರುತದ ಭಾರೀ ಬಿರುಗಾಳಿಯ ನಡುವೆ ಬಾಲಕ ತನ್ನ ತಾಯಿಗೆ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಗಾಳಿಗೆ ಹಾರಿಹೋಗುತ್ತಿರುವ ಅಂಗಡಿಯ ಟಾರ್ಪಾಲಿನ್ ಅನ್ನು ಬಾಲಕ ಮೊದಲು ಹಿಡಿದುಕೊಳ್ಳಲು ಪ್ರಯತ್ನಿಸುತ್ತಾನೆ.
ಈ ವೇಳೆ ಅವನ ತಾಯಿ ಅಂಗಡಿಯಲ್ಲಿ ವಸ್ತುಗಳನ್ನು ಗಾಳಿಗೆ ಹಾರಿಹೋಗದಂತೆ ಉಳಿಸಿಕೊಳ್ಳಲು ಹಗ್ಗ ಕಟ್ಟುತ್ತಿರುತ್ತಾರೆ. ನಂತರ ಬಾಲಕ ಭಾರೀ ಗಾಳಿಯಿಂದ ಹಾರಿಹೋಗಿದ್ದ ತನ್ನ ಅಂಗಡಿಯ ಕುರ್ಚಿಯನ್ನು ಓಡಿಹೋಗಿ ತೆಗೆದುಕೊಂಡು ಬರುತ್ತಾನೆ.
ಆ ಮಟ್ಟದ ಜವಾಬ್ದಾರಿಯನ್ನು ಗ್ರಹಿಸಿದ ಪುಟ್ಟ ಹುಡುಗನ ನಡೆ ಬಗ್ಗೆ ಆಶ್ಚರ್ಯಪಟ್ಟಿರುವ ಸಚಿವರು ವೀಡಿಯೋನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
“ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಲು ವಯಸ್ಸು ಒಂದು ಅಂಶವಲ್ಲ, ಸಂದರ್ಭಗಳು ಅದನ್ನು ಕಲಿಸುತ್ತವೆ!” ಎಂದು 31 ಸೆಕೆಂಡುಗಳ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.