ತಿರುವನಂತಪುರಂ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಓಣಂ ಫುಡ್ ಕಿಟ್ ವಿತರಿಸಲಾಗುತ್ತದೆ. ಆದರೆ, ಫುಡ್ ಕಿಟ್ ವಿತರಿಸುವ ಸಂದರ್ಭದಲ್ಲಿ ಫೋಟೋ ತೆಗೆದು ಅಧಿಕಾರಿಗಳಿಗೆ ಕಳುಹಿಸಲು ಹೊರಡಿಸಿದ ಸುತ್ತೋಲೆ ವಿವಾದಕ್ಕೆ ಕಾರಣವಾಗಿದೆ.
ಸಚಿವ ಜಿ.ಆರ್. ಅನಿಲ್, ಎಲ್ಲಾ ಪಡಿತರ ಅಂಗಡಿಗಳಿಗೆ ಈ ಕುರಿತಂತೆ ಸೂಚನೆ ನೀಡಿದ್ದರು. ಆದರೆ, ಪಡಿತರ ಅಂಗಡಿ ಮಾಲೀಕರ ಒಕ್ಕೂಟದ ಕೆಲವರು ಸೂಚನೆಯನ್ನು ಪಾಲಿಸುವುದಿಲ್ಲವೆಂದು ಹೇಳಿದ್ದಾರೆ.
ಓಣಂ ಫುಡ್ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ರಾಜ್ಯಮಟ್ಟದಲ್ಲಿ ಸಚಿವರು ಚಾಲನೆ ನೀಡಿದ್ದಾರೆ. ಪಡಿತರ ವಿತರಕರು, ಫುಡ್ ಇನ್ಸ್ಪೆಕ್ಟರ್ ಗಳು ಮತ್ತು ತಾಲೂಕು ಅಧಿಕಾರಿಗಳು ಸೋಮವಾರ ಎಲ್ಲ ಅಂಗಡಿಗಳಲ್ಲಿ ವಿತರಣೆ ಉದ್ಘಾಟಿಸಬೇಕು. ಕಾರ್ಯಕ್ರಮ ಉದ್ಘಾಟಿಸಿದ ಫೋಟೋಗಳನ್ನು ಕಳುಹಿಸಬೇಕೆಂದು ಸೂಚನೆ ನೀಡಲಾಗಿದೆ.
ಸಂಸದರು, ಶಾಸಕರು, ಪಂಚಾಯಿತಿ ಸದಸ್ಯರು ಅಥವಾ ಆಯಾ ಪ್ರದೇಶಗಳ ಪ್ರಮುಖ ವ್ಯಕ್ತಿಗಳಿಂದ ವಿತರಣೆ ಕಾರ್ಯಕ್ಕೆ ಚಾಲನೆ ನೀಡಬೇಕೆಂದು ತಿಳಿಸಲಾಗಿದೆ. ಕೊರೋನಾ ಸಾಂಕ್ರಾಮಿಕ ರೋಗದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಇಷ್ಟೊಂದು ಜನರನ್ನು ಸೇರಿಸಿ ಫುಡ್ ಕಿಟ್ ವಿತರಣೆ ಉದ್ಘಾಟನೆ ಮಾಡುವ ಅಗತ್ಯವಿದೆಯೇ ಎನ್ನುವ ಮಾತುಗಳು ಕೇಳಿ ಬಂದಿವೆ.