ಬೆಂಗಳೂರು: ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು(ILO) ಪ್ರತಿ ವರ್ಷ ಜೂನ್ 12ನೇ ತಾರೀಖಿನ ದಿನವನ್ನು “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ” ಎಂದು 2002 ರಲ್ಲಿ ಘೋಷಣೆ ಮಾಡಿದೆ.
ವಿಶ್ವ ಸಂಸ್ಥೆಯ ಎಲ್ಲಾ ಮಿತ್ರ ರಾಷ್ಟ್ರಗಳು ಪ್ರತಿ ವರ್ಷ ಜೂನ್-12 ತಾರೀಖಿನ ದಿನವನ್ನು “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ ವನ್ನಾಗಿ ಆಚರಿಸುತ್ತಾ ಬಂದಿದ್ದು, ಅದರಂತೆ ರಾಜ್ಯದಲ್ಲಿ ಪ್ರತಿ ವರ್ಷ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಹೆಚ್ಚಿನ ಮಟ್ಟದ ವ್ಯಾಪಕ ಪ್ರಚಾರಕ್ಕಾಗಿ ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಂದ, ಖಾಸಗಿ ವಲಯದ ನೌಕರರಿಂದ, ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರಿಂದ ದುಡಿಮೆ ಬಯಸುವುದಿಲ್ಲವೆಂಬ ಪ್ರಮಾಣವಚನ ಸ್ವೀಕರಿಸಬೇಕಿದೆ.
ಸರ್ಕಾರದ ಎಲ್ಲಾ ಇಲಾಖೆ /ನಿಗಮ /ಮಂಡಳಿ /ಪ್ರಾಧಿಕಾರ /ಸಂಸ್ಥೆ /ನಿರ್ದೇಶನಾಲಯ /ಕಛೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರುಗಳಿಗೆ ಈ ಪತ್ರದೊಂದಿಗೆ ಲಗತ್ತಿಸಿರುವಂತೆ 12ನೇ ಜೂನ್ 2024 ರಂದು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರಿಂದ ದುಡಿಮೆಯನ್ನು ಬಯಸುವುದಿಲ್ಲವೆಂಬ ಪ್ರಮಾಣ ವಚನವನ್ನು ಬೋಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರಮಾಣ ವಚನ
“ನಾನು ಸತ್ಯವಾಗಿ, ಪ್ರಾಮಾಣಿಕವಾಗಿ ಹಾಗೂ ಆತ್ಮಸಾಕ್ಷಿಯಾಗಿ ಪ್ರಮಾಣ ಮಾಡುವುದೇನೆಂದರೆ, ನಾನು ವಾಸಿಸುವ ಸುತ್ತ ಮುತ್ತಲಿನ ಪ್ರದೇಶ ಹಾಗೂ ನಾನು ಕೆಲಸ ಮಾಡುವ ಸ್ಥಳದಲ್ಲಿ ಯಾವುದೇ ಬಾಲಕಾರ್ಮಿಕರು ಕಂಡುಬಂದಲ್ಲಿ ನೇಮಿಸಿಕೊಂಡ ಮಾಲೀಕರು ಹಾಗೂ ಪೋಷಕರಿಗೆ ತಿಳಿವಳಿಕೆ ಹೇಳಿ ಮಗುವನ್ನು ಶಾಲೆಗೆ ಸೇರಿಸುತ್ತೇನೆ. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ತೊಡಗಿಸಿಕೊಂಡು ತಯಾರಿಸಲ್ಪಟ್ಟ ಯಾವುದೇ ವಸ್ತುವನ್ನು ಉಪಯೋಗಿಸುವುದಿಲ್ಲ ಮತ್ತು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಸೇವೆಯನ್ನು ಪಡೆಯುವುದಿಲ್ಲವೆಂದು “ವಿಶ್ವ ಬಾಲಕಾರ್ಮಿಕ ವಿರೋಧಿ ದಿನ”ವಾದ ಇಂದು ಪ್ರಮಾಣ ಮಾಡುತ್ತೇನೆ.”