ಬೆಂಗಳೂರು: ಆಗಸ್ಟ್ 25ರಂದು ವರಮಹಾಲಕ್ಷ್ಮಿ ಹಬ್ಬದ ದಿನ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಅರಿಶಿಣ, ಕುಂಕುಮ, ಬಳೆ ವಿತರಿಸಲು ಸುತ್ತೋಲೆ ಹೊರಡಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ದಿನ ದೇವಾಲಯಕ್ಕೆ ಬರುವ ಮಹಿಳೆಯರಿಗೆ ಅರಿಶಿಣ, ಕುಂಕುಮ ವಿತರಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಮಹತ್ವಪೂರ್ಣ ಸ್ಥಾನ ನೀಡಿ ಗೌರವಿಸಲಾಗುತ್ತಿದೆ. ಪ್ರತಿ ವರ್ಷ ವರ ಮಹಾಲಕ್ಷ್ಮಿ ವ್ರತ, ಸ್ವರ್ಣ ಗೌರಿ ವ್ರತ ಮತ್ತು ನವರಾತ್ರಿಗಳಲ್ಲಿ ಸ್ತ್ರೀ ದೇವತೆಗಳನ್ನು ಪೂಜಿಸಿ ಆರಾಧಿಸಲಾಗುತ್ತದೆ. ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪೌರ್ಣಮಿ ಮೊದಲ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತ ಆಚರಿಸಲಾಗುವುದು.
ಅಂದು ನಾಡಿನ ಸಮಸ್ತ ಮಹಿಳೆಯರನ್ನು ಗೌರವಿಸುವ ಸಲುವಾಗಿ ಮತ್ತು ವರಮಹಾಲಕ್ಷ್ಮಿ ಕೃಪ ಕಟಾಕ್ಷ ಲಭಿಸಲೆಂದು ದೇವಾಲಯಗಳ ವತಿಯಿಂದ ಉತ್ತಮ ಗುಣಮಟ್ಟದ ಕಸ್ತೂರಿ, ಅರಿಶಿಣ, ಕುಂಕುಮ ಮತ್ತು ಹಸಿರು ಬಳೆಗಳನ್ನು ತಂದು ಪೂಜಿಸಿ ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ಗೌರವ ಸೂಚಕವಾಗಿ ನೀಡಬೇಕು.
ಅದರ ವೆಚ್ಚವನ್ನು ಆಯಾ ದೇವಸ್ಥಾನದ ನಿಧಿಯಿಂದ ಭರಿಸಲು ತಿಳಿಸಲಾಗಿದೆ. ಪ್ರಸಾದದ ರೂಪವಾದ ಅರಿಶಿಣ ಕುಂಕುಮವನ್ನು ಕಾಗದದ ಲಕೋಟೆಗಳಲ್ಲಿ ಸರ್ಕಾರದ ಲಾಂಛನದೊಂದಿಗೆ ದೇವಾಲಯದ ಹೆಸರನ್ನು ಮುದ್ರಿಸಿ ನೀಡಬೇಕು ಎಂದು ಹೇಳಲಾಗಿದೆ.