ತೆಲಂಗಾಣದಲ್ಲಿ 18 ವರ್ಷದ ಯುವತಿಯ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆಕೆ ತನ್ನ 24 ವರ್ಷದ ಗೆಳೆಯನೊಂದಿಗೆ ಓಡಿಹೋಗಲು ಅಪಹರಣ ಚಿತ್ರಣವನ್ನು ಮೊದಲೇ ರೂಪಿಸಿದ್ದಳು. ನಂತರ ಅವರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ನಾಲ್ವರು, ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ವೀಡಿಯೊ ಬಹಿರಂಗವಾದ ಕೆಲವೇ ಗಂಟೆಗಳ ನಂತರ ಟ್ವಿಸ್ಟ್ ಸಿಕ್ಕಿದೆ. ಯುವಕನೊಂದಿಗಿನ ತನ್ನ ಮದುವೆಗೆ ಪೋಷಕರು ವಿರೋಧಿಸಿದ್ದರಿಂದ ಅಪಹರಣ ಸೂತ್ರ ಹೆಣೆದಿದ್ದಾಗಿ ಯುವತಿ ನಂತರ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದಾಳೆ.
“ಒಂದು ವರ್ಷದ ಹಿಂದೆ ನಾವು ಮದುವೆಯಾಗಿದ್ದೇವೆ. ಆಗ ನಾನು ಅಪ್ರಾಪ್ತಳಾಗಿದ್ದರಿಂದ ನನ್ನ ಪೋಷಕರು ಅದನ್ನು ಒಪ್ಪಿಕೊಳ್ಳಲಿಲ್ಲ ಮತ್ತು ನನ್ನ ಗಂಡನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈಗ ನಾವು ವಯಸ್ಕರಾಗಿದ್ದೇವೆ, ಆದ್ದರಿಂದ ನಾವು ಮದುವೆಯಾದೆವು. ನನ್ನ ಪತಿ ದಲಿತನಾಗಿರುವುದರಿಂದ ನನ್ನ ಪೋಷಕರು ಇನ್ನೂ ಆಕ್ಷೇಪಿಸುತ್ತಿದ್ದಾರೆ ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾಳೆ.
ಇಷ್ಟಪಟ್ಟು ಪ್ರಿಯಕರನೊಂದಿಗೆ ಹೋಗಿದ್ದು, ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ ಎಂದು ಯುವತಿ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೆ ನೀಡಿದ್ದಾಳೆ ಎಂದು ಎಸ್ಪಿ ಸಿರ್ಸಿಲ್ಲಾ ರಾಹುಲ್ ಹೆಗ್ಡೆ ತಿಳಿಸಿದ್ದಾರೆ.
ಈ ಹಿಂದೆ ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯಲಾಗಿದ್ದು, ಈ ವೇಳೆ ರಕ್ಷಿಸಲು ಬಂದ ತನ್ನನ್ನು ಆರೋಪಿಗಳು ಥಳಿಸಿದ್ದರೆಂದು ಯುವತಿ ತಂದೆ ಆರೋಪಿಸಿದ್ದರು.
ಜಿಲ್ಲೆಯ ಚಂದೂರ್ತಿ ಮಂಡಲದ ಮೂಡೆಪಲ್ಲಿ ಗ್ರಾಮದಲ್ಲಿ ಬೆಳಗ್ಗೆ 5.30ರ ಸುಮಾರಿಗೆ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ತಂದೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.