ತುಮಕೂರು: ನಟ ದುನಿಯಾ ವಿಜಯ್, ನಟಿ ರಚಿತಾರಾಮ್ ಅಭಿನಯದ ‘ಚೌಡಯ್ಯ’ ಚಿತ್ರತಂಡಕ್ಕೆ ತುಮಕೂರು ಸಾರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ನಿಯಮ ಉಲ್ಲಂಘಿಸಿದ ಕಾರಣಕ್ಕೆ ತುಮಕೂರು ಸಮೀಪದ ಕೈದಾಳ ಬಳಿ ಚಿತ್ರೀಕರಣ ಸ್ಥಳದಲ್ಲಿ ಇನ್ನೋವಾ ಕಾರ್ ಜಪ್ತಿ ಮಾಡಿದ್ದಾರೆ. ಹಳದಿ ಬಣ್ಣದ ಬೋರ್ಡ್ ಬದಲು ವೈಟ್ ಬೋರ್ಡ್ ಇರುವ ಇನ್ನೋವಾ ಕಾರ್ ಬಳಸಿದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ನಿಯಮದ ಪ್ರಕಾರ ವಾಣಿಜ್ಯ ಉದ್ದೇಶಕ್ಕೆ ಸ್ವಂತ ವಾಹನ ಬಳಕೆ ಮಾಡುವಂತಿಲ್ಲ. ಆದ್ದರಿಂದ ಕ್ರಮ ಕೈಗೊಳ್ಳಲಾಗಿದೆ. ನಟರು, ನಟಿಯರು ಸಿಬ್ಬಂದಿಗಳನ್ನು ಪಿಕಪ್, ಡ್ರಾಪ್ ಮಾಡಲು ಕಾರ್ ಬಳಸುತ್ತಿದ್ದ ಹಿನ್ನೆಲೆಯಲ್ಲಿ ಆರ್.ಟಿ.ಒ. ಇನ್ಸ್ಪೆಕ್ಟರ್ ಶರೀಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಾಹನ ಜಪ್ತಿ ಮಾಡಲಾಗಿದೆ. ಕರ್ನಾಟಕ ಟೂರಿಸ್ಟ್ ಡ್ರೈವರ್ ಅಸೋಸಿಯೇಷನ್ ನೀಡಿದ ದೂರು ಆಧರಿಸಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.