ಬೆಂಗಳೂರು: ಕೇಂದ್ರ ಗೃಹ ಮಂತ್ರಾಲಯ ಇತ್ತೀಚೆಗಷ್ಟೇ ಅನೇಕ ವಿನಾಯಿತಿ ನೀಡಿ ಕೋವಿಡ್ ಮಾರ್ಗಸೂಚಿ ಹೊರಡಿಸಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ವತಿಯಿಂದ ಸಾಮಾಜಿಕ, ಧಾರ್ಮಿಕ, ಕ್ರೀಡಾ ಚಟುವಟಿಕೆಗಳು, ಮನರಂಜನೆ, ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.
ಮಾಹಿತಿ ಹಾಗೂ ಪ್ರಸರಣ ಮಂತ್ರಾಲಯ ಭಾರತ ಸರ್ಕಾರದ ಮಾರ್ಗಸೂಚಿಯಂತೆ ಸಿನಿಮಾ ಹಾಲ್ ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕೊರೋನಾ ಪ್ರಸ್ತುತ ಪರಿಸ್ಥಿತಿಯನ್ನು ಮತ್ತು ಎರಡನೇ ಅಲೆ ಸಾಧ್ಯತೆಯನ್ನು ಪರಿಗಣಿಸಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಫೆಬ್ರವರಿ 28 ರ ವರೆಗೆ ಶೇಕಡ 50 ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಕಲ್ಪಿಸಲು ಸೂಚನೆ ನೀಡಲಾಗಿದೆ.
ಸಾಮಾಜಿಕ ಸಮಾರಂಭ, ಈಜುಕೊಳ, ಕ್ರೀಡಾ ಚಟುವಟಿಕೆ, ಕಚೇರಿ ಕೆಲಸ ನಿರ್ವಹಿಸುವ ಸ್ಥಳಗಳು, ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳು, ಅಂಗಡಿ, ಮಾಲ್, ಮಲ್ಟಿಪ್ಲೆಕ್ಸ್, ಮನೋರಂಜನಾ ಪಾರ್ಕ್, ಹೋಟೆಲ್, ರೆಸ್ಟೋರೆಂಟ್, ಮೆಟ್ರೋ ರೈಲು ಮೊದಲಾದವುಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದನ್ನು ತಪ್ಪಿಸಲು ವಿವಿಧ ಆಚರಣೆಗಳನ್ನು ವರ್ಚುವಲ್ ಮಾಧ್ಯಮದ ಮೂಲಕ ಕೈಗೊಳ್ಳಲು ತಿಳಿಸಲಾಗಿದೆ. ತೆರೆದ, ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಬಹುದಾಗಿದೆ ಎಂದು ಹೇಳಲಾಗಿದೆ.