ಬೆಂಗಳೂರು: 545 ಪಿಎಸ್ಐ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಕಿಂಗ್ ಪಿನ್ ಗಳು ಅನೇಕ ಮಾಹಿತಿಗಳನ್ನು ಹೊರಹಾಕಿದ್ದಾರೆ.
ಶಾಂತಿಬಾಯಿ ಪಿಎಸ್ಐ ಪರೀಕ್ಷೆ ಬರೆಯಲು ಕಿಂಗ್ ಪಿನ್ ಗಳು ನೆರವು ನೀಡಿದ್ದಾರೆ. ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ನಿವಾಸಿಯಾಗಿರುವ ಶಾಂತಿಬಾಯಿ ಪರೀಕ್ಷೆ ಅಕ್ರಮ ನಡೆಸಲು ಕಲಬುರ್ಗಿ ನೀರಾವರಿ ಇಲಾಖೆಯ ಎಇ ಮಂಜುನಾಥ ಮೇಳಕುಂದಿ ನೆರವು ನೀಡಿದ್ದಾರೆ.
ಪರೀಕ್ಷೆಯಲ್ಲಿ ಆಕ್ರಮ ಎಸಗಿ ಶಾಂತಿಬಾಯಿ ಆಯ್ಕೆಯಾಗಿದ್ದಾರೆ. 40 ಲಕ್ಷ ರೂಪಾಯಿಗೆ ಡೀಲ್ ಮಾಡಿಕೊಂಡಿದ್ದ ಮಂಜುನಾಥ ಮೇಳಕುಂದಿ ಅಕ್ರಮಕ್ಕೆ ಸಹಕಾರ ನೀಡಿದ್ದ. ಪರೀಕ್ಷೆಗೆ ಮೊದಲು 10 ಲಕ್ಷ ರೂಪಾಯಿ ಹಣವನ್ನು ಶಾಂತಿಬಾಯಿ ಪತಿ ಮೇಳಕುಂದಿಗೆ ನೀಡಿದ್ದರು. ಪಿಎಸ್ಐ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಬರುತ್ತಿದ್ದಂತೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಉಳಿದ 30 ಲಕ್ಷ ರೂಪಾಯಿ ಹಣ ನೀಡಬೇಕೆಂದು ಮಂಜುನಾಥ ಮೇಳಕುಂದಿ ಶಾಂತಿಬಾಯಿ ಪತಿಗೆ ಬೇಡಿಕೆ ಇಟ್ಟಿದ್ದು, ಈ ಹಣವನ್ನು ಹೊಂದಿಸಲು ಶಾಂತಿಬಾಯಿ ಪತಿ ಪರದಾಡುತ್ತಿದ್ದರು.
ಅಲ್ಲದೇ, ಆಯ್ಕೆಪಟ್ಟಿಯಲ್ಲಿ ಹೆಸರು ಬಂದ ನಂತರ ಶಾಂತಿಬಾಯಿ ಅವರು ಪತಿ, ಪುತ್ರನೊಂದಿಗೆ ತಿರುಪತಿಗೆ ಹೋಗಿ ಕೇಶಮುಂಡನ ಮಾಡಿಸಿಕೊಂಡಿದ್ದರು. ಮಂಜುನಾಥ ಮೇಳಕುಂದಿಗೆ ತಿರುಪತಿಯಿಂದ ಲಾಡು ಪ್ರಸಾದ ತಂದು ನೀಡಿದ್ದು, ನನಗೆ ತಿಮ್ಮಪ್ಪನ ಲಾಡು ಬೇಡ, ಹಣ ಬೇಕು ಎಂದು ಮಂಜುನಾಥ ಮೇಳಕುಂದಿ ಕೇಳಿದ್ದರು ಎನ್ನಲಾಗಿದೆ.
ಸದ್ಯ ತಲೆಮರೆಸಿಕೊಂಡಿರುವ ಪಿಎಸ್ಐ ಅಭ್ಯರ್ಥಿ ಶಾಂತಿಬಾಯಿಗಾಗಿ ಸಿಐಡಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.