ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲಾಗಿದೆ.
ಕಲ್ಬುರ್ಗಿ ಮಾತ್ರವಲ್ಲ, ಬೆಂಗಳೂರಿನ 5 ಪರೀಕ್ಷಾ ಕೇಂದ್ರಗಳಲ್ಲಿಯೂ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಹೈಟೆಕ್ ಕಾಪಿ ಮೂಲಕ ಬೆಂಗಳೂರಿನ 5 ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆಸಿರುವುದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ. ಓಎಂಆರ್ ಶೀಟ್ ನಿಂದ ಅಕ್ರಮ ನಡೆದಿರುವುದ ಗೊತ್ತಾಗಿದೆ.
ಬೆಂಗಳೂರಿನ 22 ಅಭ್ಯರ್ಥಿಗಳಲ್ಲಿ 12 ಅಭ್ಯರ್ಥಿಗಳನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ಉಳಿದ ಅಭ್ಯರ್ಥಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದು, ಬಂಧನ ಭೀತಿಯಿಂದ 10 ಅಭ್ಯರ್ಥಿಗಳು ಎಸ್ಕೇಪ್ ಆಗಿದ್ದಾರೆ. ಬಂಧಿತ ಅಭ್ಯರ್ಥಿಗಳನ್ನು ಸಿಐಡಿಗೆ ಪೊಲೀಸರು ಹಸ್ತಾಂತರ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ ಪರೀಕ್ಷೆ ಬರೆದ 22 ಅಭ್ಯರ್ಥಿಗಳ ಓಎಂಆರ್ ಶೀಟ್ ನಿಂದ ಸತ್ಯ ಬಯಲಾಗಿದೆ. ಓಎಂಆರ್ ಶೀಟ್ ಮತ್ತು ಕಾರ್ಬನ್ ಕಾಪಿಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದ ಹಿನ್ನಲೆಯಲ್ಲಿ ಅಂತಹ ಉತ್ತರ ಪತ್ರಿಕೆಗಳನ್ನು ಎಫ್ಎಸ್ಎಲ್ ಗೆ ರವಾನೆ ಮಾಡಲಾಗಿದೆ. ತನಿಖೆ ತೀವ್ರಗೊಂಡಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.