ಬೆಂಗಳೂರು: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ದೂರು ಮತ್ತು ಸಂತ್ರಸ್ತೆಯ ವಿರುದ್ಧ ವಿನಯ್ ಕುಲಕರ್ಣಿ ದಾಖಲಿಸಿದ್ದ ಪ್ರತಿ ದೂರು ಸೇರಿ ಎರಡೂ ಪ್ರಕರಣಗಳ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿ ಆದೇಶಿಸಿದೆ.
ಇದರ ಬೆನ್ನಲ್ಲೇ ಈ ಎರಡೂ ಪ್ರಕರಣಗಳನ್ನು ಸಂಜಯನಗರ ಠಾಣೆಯಿಂದ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ವಿನಯ್ ಕುಲಕರ್ಣಿ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಹಾವೇರಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಅ. 8ರಂದು ದೂರು ದಾಖಲಿಸಿದ್ದರು.
ಇದರ ಬೆನ್ನಲ್ಲೇ ಶಾಸಕ ವಿನಯ್ ಕುಲಕರ್ಣಿಯವರು ಸಾಮಾಜಿಕ ಕಾರ್ಯಕರ್ತೆ ಮತ್ತು ಕನ್ನಡ ಸುದ್ದಿ ವಾಹಿನಿಯೊಂದರ ಮುಖ್ಯಸ್ಥರ ವಿರುದ್ಧ ಅ.9ರಂದು ಪ್ರತಿ ದೂರು ದಾಖಲಿಸಿದ್ದರು.