ನವದೆಹಲಿ: ಕೌನ್ಸಿಲ್ ಆಫ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಸಿಎಸ್ಇ) ಸೋಮವಾರ 10 ಮತ್ತು 12 ನೇ ತರಗತಿಯ ಕೆಲವು ವಿಷಯಗಳ ಪರೀಕ್ಷೆ ದಿನಾಂಕಗಳನ್ನು ಬದಲಿಸಿದೆ.
ಐಸಿಎಸ್‌ಇ (10 ನೇ ತರಗತಿ) ಯ ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಅನಿವಾರ್ಯ ಕಾರಣಗಳಿಂದ ಮೇ 13 ಮತ್ತು 15 ರಂದು ಯಾವುದೇ ಪರೀಕ್ಷೆ ಇರುವುದಿಲ್ಲ.
ಈ ಪರೀಕ್ಷೆಗಳಲ್ಲಿ ಬದಲಾವಣೆ
ಈ ಮೊದಲು ಮೇ 13 ರಂದು ನಡೆಯಬೇಕಿದ್ದ 10 ನೇ ತರಗತಿ ಅರ್ಥಶಾಸ್ತ್ರ(ಗ್ರೂಪ್ II ಎಲೆಕ್ಟಿವ್) ಪರೀಕ್ಷೆ ಮೇ 4 ರಂದು ನಡೆಯಲಿದೆ. ಮೇ 15 ರಂದು ನಡೆಯಬೇಕಿದ್ದ ‘ಆರ್ಟ್ ಪೇಪರ್ 2′(ನೇಚರ್ ಡ್ರಾಯಿಂಗ್ / ಪೇಂಟಿಂಗ್) ಪರೀಕ್ಷೆ ಮೇ 22 ರಂದು ನಡೆಯಲಿದೆ. ‘ಆರ್ಟ್ ಪೇಪರ್ 3′(ಒರಿಜಿನಲ್ ಕಾಂಪೋಸಿಟ್) ಮತ್ತು ‘ಆರ್ಟ್ ಪೇಪರ್ 4′(ಅಪ್ಲೈಡ್ ಆರ್ಟ್) ಕ್ರಮವಾಗಿ ಜೂನ್ 29 ಮತ್ತು 5 ರಂದು ನಡೆಯಲಿವೆ.
ಜೂನ್ 16 ರವರೆಗೆ ಪರೀಕ್ಷೆ
ಐಎಸ್‌ಸಿ(12 ನೇ ತರಗತಿ)ಯ ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಮೇ 13 ಮತ್ತು 15 ಮತ್ತು ಜೂನ್ 12 ರಂದು ಯಾವುದೇ ಪರೀಕ್ಷೆ ಇರುವುದಿಲ್ಲ. ‘ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್'(ಐಸಿಎಸ್ಇ) ಅಡಿಯಲ್ಲಿ 10 ನೇ ತರಗತಿ ಪರೀಕ್ಷೆಗಳು ಮೇ 5 ರಿಂದ ಜೂನ್ 7 ರವರೆಗೆ ನಡೆಯಲಿದೆ ಎಂದು ಸಿಐಸಿಎಸ್ಇ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಅರಾಥೂನ್ ತಿಳಿಸಿದ್ದಾರೆ.
‘ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್’ (ಐಎಸ್ಸಿ) ಅಡಿಯಲ್ಲಿ 12 ನೇ ತರಗತಿ ಪರೀಕ್ಷೆ ಏಪ್ರಿಲ್ 8 ರಿಂದ ಜೂನ್ 16 ರವರೆಗೆ ನಡೆಯಲಿದೆ. ಪರೀಕ್ಷೆಯ ಫಲಿತಾಂಶಗಳನ್ನು ಜುಲೈ ವೇಳೆಗೆ ಶಾಲೆಗಳ ಮುಖ್ಯಸ್ಥರ ಮೂಲಕ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.