ಕಾಬೂಲ್: ಸೇನೆ ವಾಪಸಾತಿಗೆ ನೀಡಲಾಗಿರುವ ಆ.31ರ ಗಡುವನ್ನು ವಿಸ್ತರಿಸುವುದಿಲ್ಲಎಂದು ತಾಲಿಬಾನ್ ಉಗ್ರರು ಬೆದರಿಕೆ ಹಾಕಿದ ಬೆನ್ನಿಗೇ ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾಅಬ್ದುಲ್ ಘನಿ ಬರಾದರ್ ಜತೆ ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ಮುಖ್ಯಸ್ಥ ವಿಲಿಯಂ ಬರ್ನ್ಸ್ ಸೋಮವಾರ ರಹಸ್ಯ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ತಾಲಿಬಾನ್ ಆಡಳಿತದಲ್ಲಿಆಫ್ಘನ್ ಅಧ್ಯಕ್ಷ ಎಂದೇ ಬಿಂಬಿತನಾಗಿರುವ ಬರಾದರ್ ಜತೆ ಹಲವು ಗಂಟೆಗಳ ಮಾತುಕತೆ ನಡೆಸಿದ್ದು, ಗಡುವು ವಿಸ್ತರಣೆ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಬರಾದರ್, ಅಮೆರಿಕ ತನಿಖಾ ಸಂಸ್ಥೆಗಳಿಗೆ ಅಪರಿಚಿತನಲ್ಲ. ಸಿಐಎ ಮತ್ತು ಪಾಕಿಸ್ತಾನ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಬರಾದರ್ ನನ್ನು ಎಂಟು ವರ್ಷಗಳ ಕಾಲ ಜೈಲಿಗೆ ಅಟ್ಟಲಾಗಿತ್ತು.
ಅಮೆರಿಕ ಸೇನೆಯ ಸಂಪೂರ್ಣ ವಾಪಸಾತಿ ಬಳಿಕ ಸರಕಾರ ರಚಿಸುವ ಉಮೇದಿಯಲ್ಲಿರುವ ತಾಲಿಬಾನಿಗಳು ಸರಕಾರ ರಚನೆಗೂ ಮುನ್ನವೇ ಹಣಕಾಸು ಸಚಿವ ಸೇರಿ ಹಲವು ಪ್ರಮುಖ ನೇಮಕಗಳನ್ನು ಮಾಡಿದೆ. ಹಣಕಾಸು ಸಚಿವನಾಗಿ ಗುಲ್ ಅಘಾ, ಹಂಗಾಮಿ ಒಳಾಡಳಿತ ಸಚಿವನಾಗಿ ಸಾದ್ರ್ ಇಬ್ರಾಹಿಂ, ಗುಪ್ತಚರ ಮುಖ್ಯಸ್ಥನಾಗಿ ನಾಜಿಬುಲ್ಲಾ, ರಾಜ್ಯಪಾಲನಾಗಿ ಮುಲ್ಲಾಶಿರಿನ್, ಕಾಬೂಲ್ ಮೇಯರ್ ಆಗಿ ಹಮ್ದುಲ್ಲಾ ನೊಮಾನಿಯನ್ನು ಆಯ್ಕೆ ಮಾಡಲಾಗಿದೆ.