ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿರುವ ಮಧ್ಯೆ ಅಲ್ಲಿನ ಬ್ಯಾಪ್ಟಿಸ್ಟ್ ಚರ್ಚ್ ಕೌನ್ಸಿಲ್ (NBCC), ಕೋಮುವಾದಿಗಳ ವಿರುದ್ಧ ಮತ ಚಲಾಯಿಸುವಂತೆ ಕರೆ ನೀಡಿದೆ. ಇದು ಆಡಳಿತಾರೂಢ ನ್ಯಾಷನಲ್ ಡೆಮೊಕ್ರೆಟಿಕ್ ಪೀಪಲ್ಸ್ ಪಾರ್ಟಿ ಹಾಗೂ ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಭಾನುವಾರದಂದು ಈ ಕುರಿತ ಸಂದೇಶವನ್ನು ಎನ್ ಬಿ ಸಿ ಸಿ ಅಡಿ ಬರುವ ಎಲ್ಲ ಚರ್ಚ್ ಗಳಲ್ಲೂ ರವಾನಿಸಲಾಗಿದ್ದು, ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯದ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವವರನ್ನು ಕಾನೂನಿನ ಕಟಕಟೆಗೆ ತರಲು ಶಕ್ತರಾದ ಸಮರ್ಥರನ್ನು ಚುನಾಯಿಸಿ ಎಂದು ಹೇಳಿದೆ.
ನಾಗಾಲ್ಯಾಂಡ್ ಜನಸಂಖ್ಯೆಯಲ್ಲಿ ಶೇಕಡ 89 ರಷ್ಟು ಕ್ರಿಶ್ಚಿಯನ್ ಮತದಾರರಿದ್ದು, ಈ ಪೈಕಿ ಶೇಕಡಾ 75 ಮಂದಿ ನಾಗಾಲ್ಯಾಂಡ್ ಬ್ಯಾಪ್ಟಿಸ್ಟ್ ಚರ್ಚ್ ಕೌನ್ಸಿಲ್ ಅಡಿ ಬರಲಿದ್ದಾರೆ ಎನ್ನಲಾಗಿದೆ. ಹೀಗಾಗಿ NBCC ಪ್ರಧಾನ ಕಾರ್ಯದರ್ಶಿ ರೆವರೆಂಡ್ Zelhou ಸಂದೇಶ ಬಿಡುಗಡೆ ಮಾಡಿದ್ದರು.
ಇನ್ನು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ Kuputo Shohe, ನಮ್ಮ ಪಕ್ಷ ಕ್ರಿಶ್ಚಿಯನ್ ವಿರೋಧಿಯಲ್ಲ. ಚುನಾವಣೆ ಸಂದರ್ಭದಲ್ಲಿ ಹೊರಟಿರುವ ಈ ಸಂದೇಶ ಒಳ್ಳೆ ಅಭಿರುಚಿಯಿಂದ ಕೂಡಿಲ್ಲ ಎಂದಿದ್ದಾರೆ. ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಧಾರ್ಮಿಕ ವಿಚಾರ ಪ್ರಸ್ತಾಪಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಾಗಾಲ್ಯಾಂಡ್ ಬಿಜೆಪಿ ಇಲ್ಲಿನ ಸಮುದಾಯದಷ್ಟೇ ಕ್ರಿಶ್ಚಿಯನ್ ಆಗಿದೆ ಎಂದಿದ್ದಾರೆ.