
ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಸ್ಕರ್ಟ್, ಶರ್ಟ್ ಮಾದರಿ ಸಮವಸ್ತ್ರದ ಬದಲಿಗೆ ಚೂಡಿದಾರ್, ಪ್ಯಾಂಟ್ ವಸ್ತ್ರಸಂಹಿತೆ ಜಾರಿಗೊಳಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ.
ಶರ್ಟ್, ಸ್ಕರ್ಟ್ ಮಾದರಿ ಸಮವಸ್ತ್ರ ಧರಿಸಿಕೊಂಡು ವಿದ್ಯಾರ್ಥಿನಿಯರ ಖಾಸಗಿ ಶಾಲೆಗೆ ಹೋಗುತ್ತಿದ್ದು, ಇದರಿಂದ ಮುಜುಗರದ ಸನ್ನಿವೇಶ ಎದುರಿಸುವಂತಾಗಿದೆ. ಚೂಡಿದಾರ್ ಅಥವಾ ಪ್ಯಾಂಟ್ ಸಮವಸ್ತ್ರ ನಿಗದಿಪಡಿಸಬೇಕೆಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು ಮಾಡಿದೆ.
ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಚೂಡಿದಾರ್ ಸಮವಸ್ತ್ರವನ್ನಾಗಿ ನಿಗದಿಪಡಿಸಿದೆ. ಆದರೆ ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿ ಮಂಡಿ ಮೇಲೆ ಸ್ಕರ್ಟ್ ಇರುವ ಸಮವಸ್ತ್ರ ನಿಗದಿ ಮಾಡುತ್ತಿದ್ದು, ಇದರಿಂದಾಗಿ ವಿದ್ಯಾರ್ಥಿನಿಯರು, ಪೋಷಕರು ಒಲ್ಲದ ಮನಸ್ಸಿನಿಂದ ಆಡಳಿತ ಮಂಡಳಿಗಳ ಒತ್ತಡಕ್ಕೆ ಮಣಿದು ಸ್ಕರ್ಟ್ ಹಾಕಿಕೊಂಡು ಹೋಗುವಂತಾಗಿದೆ.
ನೆಲದ ಮೇಲೆ ಕುಳಿತುಕೊಳ್ಳುವಾಗ, ವಾಹನಗಳಲ್ಲಿ ಸಂಚರಿಸುವ ವೇಳೆ, ಸೈಕಲ್ ಓಡಿಸುವಾಗ, ಕ್ರೀಡೆಗಳಲ್ಲಿ ಭಾಗವಹಿಸುವಾಗ ವಿದ್ಯಾರ್ಥಿನಿಯರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕಿಯರಿಗೆ ಶಾಲೆಯಲ್ಲಿ ಶರ್ಟ್ ಮತ್ತು ಸ್ಕರ್ಟ್ ಸಮವಸ್ತ್ರ ಬದಲಿಗೆ ಚೂಡಿದಾರ್ ಪ್ಯಾಂಟ್ ವಸ್ತ್ರ ಸಂಹಿತೆ ಜಾರಿಗೊಳಿಸಬೇಕೆಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಲಾಗಿದೆ.
ರಾಜ್ಯದ ಖಾಸಗಿ ಶಾಲೆಗಳಲ್ಲಿ ಸುಮಾರು 9.68 ಲಕ್ಷ ವಿದ್ಯಾರ್ಥಿಗಳಿದ್ದು, ಈ ಶಾಲೆಗಳಿಗೆ ವಸ್ತ್ರ ಸಂಹಿತೆ ನಿಗದಿ ಮಾಡುವ ಕುರಿತಾಗಿ ಶಿಕ್ಷಣ ಇಲಾಖೆಯಲ್ಲಿ ಯಾವುದೇ ನಿಯಮವಿಲ್ಲ. ಶಾಲೆಗಳು ವಿವಿಧ ರೀತಿಯಲ್ಲಿ ಸಮವಸ್ತ್ರ ನಿಗದಿ ಮಾಡಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.