ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕು ಮತ್ತೆ ವಕ್ಕರಿಸಿದ್ದು, ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಈ ನಡುವೆ ಆರೋಗ್ಯ ಇಲಾಖೆ ರಾಜ್ಯದಲ್ಲಿ ಜನರಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಆದರೆ ಸಧ್ಯಕ್ಕೆ ಯಾವುದೇ ಕಠಿಣ ನಿರ್ಬಂಧವನ್ನು ಹೇರಿಲ್ಲ.
ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಕೋವಿಡ್ ಗೆ ಓರ್ವರು ಬಲಿಯಾಗಿದ್ದಾರೆ. ಚಾಮರಾಜಪೇಟೆಯ 64 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಕಿಡ್ನಿ ವೈಫಲ್ಯ, ಅಸ್ತಮಾ, ಹೃದಯ ಸಮಸ್ಯೆ, ನ್ಯುಮೋನಿಯಾದಿಂದ ಮೃತಪಟ್ಟಿದ್ದಾರೆ ಎಂದರು.
ರಾಜ್ಯದಲ್ಲಿಯೂ ಕೋವಿಡ್ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದ್ದು, ಜನಸಂದಣಿ ಪ್ರದೇಶಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
ಇನ್ನು ಕ್ರಿಸ್ ಮಸ್, ಹೊಸ ವರ್ಷಾಚಣೆಗೆ ಸದ್ಯಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಎರಡು ದಿನಗಳ ಕೋವಿಡ್ ಟೆಸ್ಟಿಂಗ್ ವರದಿ ನೋಡಿಕೊಂಡು ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಂತರಾಷ್ಟ್ರೀಯ ಪ್ರಯಾಣಿಕರಿಗೂ ಯಾವುದೇ ಟೆಸ್ಟಿಂಗ್ ಬಗ್ಗೆ ಇನ್ನೂ ಸೂಚಿಸಲಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಧ್ಯಕ್ಕೆ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಉಚಿತವಿದೆ ಎಂದು ಹೇಳಿದರು.
ಸಕ್ಕರೆ ಕಾಯಿಲೆ ಇರುವವರು, ಆರೋಗ್ಯ ಸಮಸ್ಯೆ ಇರುವವರು, ವಯಸ್ಸಾದವರು, ಗರ್ಭಿಣಿಯರು ಹೆಚ್ಚು ಎಚ್ಚರಿಕೆಯಿಂದ ಇರುವುದು ಸೂಕ್ತ. ಅನಗತ್ಯವಾಗಿ ಜನಸಂದಣಿ ಪ್ರದೇಶಗಳಿಗೆ ತೆರಳುವುದನ್ನು ಕಡಿಮೆ ಮಾಡಿ ಎಂದು ಸಲಹೆ ನೀಡಿದರು.