ಐಜ್ವಾಲ್: ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಹಬ್ಬದ ಸಿದ್ಧತೆ ಬಹಳ ಜೋರಾಗಿಯೇ ನಡೆಯುತ್ತಿದೆ. ಇದೀಗ ಹಬ್ಬಕ್ಕೂ ಮುನ್ನ ಅಸ್ಸಾಂ ರೈಫಲ್ಸ್ ಸೈನಿಕರು ಮಿಜೋರಾಂನಲ್ಲಿ 47 ಅಡಿಗಳಷ್ಟು ದೊಡ್ಡದಾದ ಕ್ರಿಸ್‌ಮಸ್ ಸ್ಟಾರ್ ನಿರ್ಮಿಸಿದ್ದಾರೆ
23 ಸೆಕ್ಟರ್ ಅಸ್ಸಾಂ ರೈಫಲ್ಸ್‌ನ ಲುಂಗ್ಲೆ ಬೆಟಾಲಿಯನ್ ಮಿಜೋರಾಂನ ಲುಂಗ್ಲೆಯಲ್ಲಿ ಬೃಹತ್ ಕ್ರಿಸ್‌ಮಸ್ ಸ್ಟಾರ್ ಅನ್ನು ನಿರ್ಮಿಸಿದೆ ಎಂದು ಐಜ್ವಾಲ್‌ನಲ್ಲಿರುವ ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
47 ಅಡಿ ಎತ್ತರದ ಸ್ಟಾರ್ ಈಶಾನ್ಯದ ಅತಿದೊಡ್ಡ ಕ್ರಿಸ್ಮಸ್ ಸ್ಟಾರ್ ಆಗಿದೆ. ಸ್ಥಳೀಯ ಜನತೆಗೆ ಸಕಾರಾತ್ಮಕತೆ ಮತ್ತು ಒಗ್ಗಟ್ಟಿನ ಸಂದೇಶ ನೀಡುವ ಸಲುವಾಗಿ ಈ ಕ್ರಿಸ್ಮಸ್ ಸ್ಟಾರ್ ಅನ್ನು ನಿರ್ಮಿಸಲಾಗಿದೆ.
ಕೋವಿಡ್ ನಿರ್ಬಂಧಗಳಿಂದಾಗಿ ಕಳೆದ ವರ್ಷ ಈಶಾನ್ಯ ಪ್ರದೇಶದಾದ್ಯಂತ ಕ್ರಿಸ್‌ಮಸ್ ಆಚರಣೆಗಳನ್ನು ಬಹಳ ಸರಳವಾಗಿ ಆಚರಿಸಲಾಗಿತ್ತು. ಇದೀಗ ಈ ಬಾರಿ ಅತಿ ದೊಡ್ಡ ಸ್ಟಾರ್ ನಿರ್ಮಿಸುವ ಮುಖಾಂತರ ಜನರನ್ನು ಬೆರಗುಗೊಳಿಸಿದೆ. ಸ್ಟಾರ್ ವೀಕ್ಷಿಸಲು ಸ್ಥಳೀಯ ನಿವಾಸಿಗಳನ್ನು ಆಹ್ವಾನಿಸಲಾಗಿದೆ. ಪಿಕ್ನಿಕ್ ಮತ್ತು ಕುಟುಂಬ ವಿಹಾರಗಳಿಗೆ ಇದು ಪ್ರಮುಖ ಆಕರ್ಷಣೆಯಾಗಿದೆ.
ಕ್ರಿಸ್‌ಮಸ್‌ನ ಉತ್ಸಾಹವನ್ನು ಹರಡಲು ಅಸ್ಸಾಂ ರೈಫಲ್ಸ್‌ನ ಪ್ರಯತ್ನಗಳಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಗಾಲ್ಯಾಂಡ್ ಸರ್ಕಾರದ ಯೋಜನೆ ಮತ್ತು ಸಮನ್ವಯ ಇಲಾಖೆ, ಸೋಮವಾರ 2ನೇ ಆವೃತ್ತಿಯ ನಾಗಾಲ್ಯಾಂಡ್ ಫಾರ್ ಗ್ರೀನ್ ಕ್ರಿಸ್‌ಮಸ್ ಅಭಿಯಾನವನ್ನು ಪ್ರಾರಂಭಿಸಿದೆ. ಸುಸ್ಥಿರ ಮತ್ತು ಪರಿಸರ ಸ್ನೇಹಿ ಕ್ರಿಸ್‌ಮಸ್ ಆಚರಿಸುವಂತೆ ನಾಗರಿಕರಲ್ಲಿ ಒತ್ತಾಯಿಸಲಾಗಿದೆ.