ಸಾಮಾನ್ಯವಾಗಿ ಹೆಸರಿನ ವಿಷ್ಯ ಬಂದಾಗ ನಾವು ಹೆಸರಿನಲ್ಲೇನಿದೆ ಎನ್ನುತ್ತೇವೆ. ಆದ್ರೆ ಹೆಸರಿನಲ್ಲೂ ಸಾಕಷ್ಟಿದೆ ಎಂಬುದು ಈ ಗ್ರಾಮಸ್ಥರನ್ನು ನೋಡಿದಾಗ ತಿಳಿಯುತ್ತದೆ. ಗ್ರಾಮದ ಹೆಸರು ಜನರಿಗೆ ದೊಡ್ಡ ತಲೆನೋವಾಗಿದೆ. ಗ್ರಾಮದ ಹೆಸರು ತಲೆ ತಗ್ಗಿಸುವಂತೆ ಮಾಡುತ್ತದೆ. ಜೊತೆಗೆ ಅನೇಕ ಮದುವೆ ಮುರಿದು ಬೀಳಲು ಇದು ಕಾರಣವಾಗಿದೆ.
ಅಷ್ಟಕ್ಕೂ ಆ ಗ್ರಾಮದ ಹೆಸರೇನು ಅಂದ್ರಾ..? ಆ ಗ್ರಾಮದ ಹೆಸರು ಚೋರಪುರ. ರಾಜಸ್ಥಾನದಲ್ಲಿದೆ. ಈ ಹೆಸರು ಗ್ರಾಮಸ್ಥರಿಗೆ ಸಮಸ್ಯೆ ತಂದೊಡ್ಡಿದೆ. ಅನೇಕ ಸಂದರ್ಭದಲ್ಲಿ ಗ್ರಾಮದ ಹೆಸರಿನ ಕಾರಣಕ್ಕೆ ಇಲ್ಲಿನವರು ಮುಜುಗರ ಅನುಭವಿಸಿದ್ದಾರೆ. ಗ್ರಾಮದ ಹೆಸರನ್ನು ಬದಲಿಸುವಂತೆ ಮನವಿ ಕೂಡ ಮಾಡಲಾಗಿದೆ. ಗ್ರಾಮಕ್ಕೆ ಸಜ್ಜನ್ ಪುರ ಎಂದು ಹೆಸರಿಡುವಂತೆಯೂ ಅವರು ಕೇಳಿದ್ದಾರೆ.
ಈ ಗ್ರಾಮದಲ್ಲೂ ಇಂಟರ್ನೆಟ್ ವ್ಯವಸ್ಥೆಯಿದೆ. ಆದ್ರೆ ಮದುವೆಗೆ ಸಂಬಂಧ ಸಿಗ್ತಿಲ್ಲ. ಗ್ರಾಮದ ಹೆಸರು ಕೇಳಿಯೇ ಅನೇಕ ಮದುವೆ ಮುರಿದುಬಿದ್ದಿದೆ. ಶಾಲೆ ಮಕ್ಕಳು ಕೂಡ ಗ್ರಾಮಕ್ಕೆ ಯಾಕೆ ಈ ಹೆಸರು ಬಂದಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಗ್ರಾಮದಲ್ಲಿ 100 ಕುಟುಂಬಗಳಿವೆ. ಬಹುತೇಕರು ಕುಶ್ವಾಹ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದಷ್ಟು ಬೇಗ ಗ್ರಾಮದ ಹೆಸರು ಬದಲಿಸಿಕೊಡಿ ಎಂಬುದು ಅವರೆಲ್ಲರ ಬೇಡಿಕೆಯಾಗಿದೆ. ಬೇರೆ ಗ್ರಾಮಸ್ಥರಿಂದ ಸಾಕಷ್ಟು ಅವಮಾನವಾಗಿದೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ.