ನವದೆಹಲಿ: ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ 13 ಮಂದಿ ತಮಿಳುನಾಡಿನ ಕೂನೂರು ಬಳಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ. ದುರಂತದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹವಾಮಾನ ವೈಪರೀತ್ಯ, ತಾಂತ್ರಿಕ ದೋಷ ಮತ್ತು ಪೈಲಟ್ ಪ್ರಮಾದ ಎಸಗಿರುವ ಸಾಧ್ಯತೆ ಕಡಿಮೆ ಇದೆ. ಹೆಲಿಕ್ಯಾಪ್ಟರ್ ಪತನಕ್ಕೆ ಕಾರಣ ನಿಗೂಢವಾಗಿದ್ದು, ಹೆಲಿಕಾಪ್ಟರ್ ದುರಂತ ಸಾವಿನ ಹಿಂದೆ ಸಂಚು ಇರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.
ಎಂತಹುದೇ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಹಾರಾಟ ನಡೆಸುವ ಸಾಮರ್ಥ್ಯವನ್ನು MI 17 V5 ಹೆಲಿಕಾಪ್ಟರ್ ಹೊಂದಿದೆ. ಯುದ್ಧದ ಸಂದರ್ಭದಲ್ಲಿ ಮತ್ತು ತುರ್ತು ಸಂದರ್ಭದಲ್ಲಿ ಬಳಕೆಮಾಡುವ, ರಕ್ಷಣಾ ಕಾರ್ಯಾಚರಣೆಗಳಲ್ಲಿ ಬಳಸಲಾಗುವ ಹವಾಮಾನ ವೈಪರೀತ್ಯವನ್ನು ಸುಲಲಿತವಾಗಿ ಎದುರಿಸಬಲ್ಲ ಸಾಮರ್ಥ್ಯವನ್ನು ಕೂಡ ಹೊಂದಿದೆ.
ಬಿಪಿನ್ ರಾವತ್ ಅವರ ಸಾವಿನ ಹಿಂದೆ ಒಳಸಂಚು ಇರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಚೀನಾ ಪಾಕಿಸ್ತಾನ ವಿರುದ್ಧ ಬಿಪಿನ್ ರಾವತ್ ಕೆಂಡ ಕಾರುತ್ತಿದ್ದರು. ಅಲ್ಲದೆ, ಇತ್ತೀಚೆಗೆ ಚೀನಾ-ಪಾಕಿಸ್ತಾನ ಮಯನ್ಮಾರ್ ಗಡಿಪ್ರದೇಶದಲ್ಲಿ ನಡೆದ ಕಾರ್ಯಾಚರಣೆ, ಸರ್ಜಿಕಲ್ ಸ್ಟ್ರೈಕ್ ನಲ್ಲಿ ಬಿಪಿನ್ ರಾವತ್ ಪಾತ್ರ ಪ್ರಮುಖವಾಗಿದ್ದು, ಭಾರತದ ಎಲ್ಲ ಮೂರು ಸೇನಾಪಡೆಗಳ ಮೊದಲ ಮುಖ್ಯಸ್ಥರಾಗಿದ್ದ ಅವರ ಸಾವು ಅನುಮಾನಕ್ಕೆ ಕಾರಣವಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಪ್ರತಿಕೂಲ ಪರಿಸ್ಥಿತಿ ಇರಲಿಲ್ಲ. ಇದ್ದರೆ ಪೈಲಟ್ ವಾಪಾಸಾಗುತ್ತಿದ್ದರು. ಇನ್ನು ಸಾಕಷ್ಟು ತಾಂತ್ರಿಕ ಪರೀಕ್ಷೆಗೆ ಒಳಪಟ್ಟ ನಂತರವೇ ವಿವಿಐಪಿ ಹೆಲಿಕಾಪ್ಟರ್ ಗಳ ಹಾರಾಟ ನಡೆಸಲಾಗುತ್ತದೆ. ಗಣ್ಯರನ್ನು ಕರೆದೊಯ್ಯುವ ಇಂತಹ ಹೆಲಿಕಾಪ್ಟರ್ ಗಳಲ್ಲಿ ಅನುಭವಿ ಪೈಲಟ್ ಗಳಿರುತ್ತಾರೆ. ಹೀಗಿರುವಾಗ ದುರಂತ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ.
ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ವೆಲ್ಲಿಂಗ್ಟನ್ ಚಿಕಿತ್ಸೆ ಪಡೆಯುತ್ತಿದ್ದು, ಅವರು ನೀಡುವ ಮಾಹಿತಿ ಮತ್ತು ಸಮಗ್ರ ತನಿಖೆಯಿಂದ ದುರಂತದ ಕಾರಣ ಹೊರಬೀಳಬಹುದು ಎನ್ನಲಾಗಿದೆ.