ಬೆಳಗಿನ ಉಪಾಹಾರ ದಿನದ ಅತ್ಯಂತ ಮುಖ್ಯವಾದ ಆಹಾರಗಳಲ್ಲೊಂದು. ಆರೋಗ್ಯಕರ ಆಹಾರದೊಂದಿಗೆ ದಿನವನ್ನು ಪ್ರಾರಂಭಿಸಬೇಕು. ಹಾಗಾಗಿ ಬೆಳಗಿನ ಉಪಾಹಾರದಲ್ಲಿ ತರಕಾರಿಗಳನ್ನು ಸೇವಿಸುವುದು ಉತ್ತಮ. ಇದು ದಿನವಿಡೀ ನಮ್ಮನ್ನು ಕ್ರಿಯಾಶೀಲವಾಗಿಡುತ್ತದೆ, ದೇಹಕ್ಕೆ ಬೇಕಾದ ಪೌಷ್ಟಿಕಾಂಶವನ್ನೂ ಒದಗಿಸುತ್ತದೆ. ಹಾಗಾಗಿ ಬೆಳಗಿನ ತಿಂಡಿಗೆ ಯಾವೆಲ್ಲಾ ತರಕಾರಿಗಳ ಸೇವನೆ ಸೂಕ್ತ ಎಂಬುದನ್ನು ನೋಡೋಣ.
ಕ್ಯಾಪ್ಸಿಕಂ : ಕ್ಯಾಪ್ಸಿಕಂನಿಂದ ಅನೇಕ ತಿನಿಸುಗಳನ್ನು ತಯಾರಿಸಬಹುದು. ಪಿಜ್ಜಾದಿಂದ ಹಿಡಿದು ಬಹುತೇಕ ಎಲ್ಲಾ ಸ್ನಾಕ್‌ಗಳಲ್ಲೂ ಇದನ್ನು ಬಳಸಲಾಗುತ್ತದೆ. ವಿಟಮಿನ್ ಎ, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಸಲಾಡ್, ಸ್ಯಾಂಡ್ವಿಚ್ ಅಥವಾ ಬೇಯಿಸಿದ ಮೊಟ್ಟೆಗಳಿಗೆ ಬೆರೆಸಿಕೊಂಡು ಇದನ್ನು ತಿನ್ನಬಹುದು.
ಬ್ರೊಕೊಲಿ
ಹೂಕೋಸುಗಳಂತೆ ಕಾಣುವ ಬ್ರೊಕೊಲಿಯು ಸೂಪರ್‌ಫುಡ್‌ಗಿಂತ ಕಡಿಮೆಯಿಲ್ಲ. ಇದರಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಪ್ರೋಟೀನ್‌ಗಳಿವೆ. ಇದನ್ನು ಸಲಾಡ್ ಮತ್ತು ಆಮ್ಲೆಟ್‌ನೊಂದಿಗೆ ತಿನ್ನಬಹುದು. ಇತರ ತರಕಾರಿ ಬೆರೆಸಿ ಫ್ರೈ ಮಾಡಬಹುದು.
ಕ್ಯಾರೆಟ್
ಕ್ಯಾರೆಟ್ ವರ್ಷವಿಡೀ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಪ್ರಮುಖ ಪೋಷಕಾಂಶಗಳಾದ ಬೀಟಾ-ಕ್ಯಾರೋಟಿನ್, ವಿಟಮಿನ್ ಎ ಮತ್ತು ಫೈಬರ್ ಇದರಲ್ಲಿವೆ. ಹಾಗಾಗಿ ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕ್ಯಾರೆಟ್ ಸಲಾಡ್, ಸ್ಮೂಥಿ ಅಥವಾ ಪರೋಟಾ ಮಾಡಿಕೊಂಡು ಕೂಡ ತಿನ್ನಬಹುದು.
ಪಾಲಕ್ ಸೊಪ್ಪು : ಇದು ಅತ್ಯಂತ ಆರೋಗ್ಯಕರ ಆಹಾರಗಳಲ್ಲೊಂದು. ವಿಟಮಿನ್ ಕೆ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಪಾಲಕ್ ಸೊಪ್ಪಿನಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದನ್ನು ಸ್ಮೂಥಿ ಮಾಡಿ ಕುಡಿಯಬಹುದು. ಆಮ್ಲೆಟ್ ಅಥವಾ ಸ್ಯಾಂಡ್‌ವಿಚ್‌ನಲ್ಲಿ ಸೇರಿಸಿ ತಿನ್ನಬಹುದು.
ಟೊಮೆಟೊ : ಟೊಮೇಟೊ ಒಂದು ಸಾಮಾನ್ಯ ತರಕಾರಿಯಾಗಿದ್ದು ಇದನ್ನು ಹಲವು ರೀತಿಯಾಗಿ ಬಳಸಲಾಗುತ್ತದೆ. ಲೈಕೋಪೀನ್, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ನಂತಹ ಪ್ರಮುಖ ಪೋಷಕಾಂಶಗಳು ಟೊಮೆಟೋದಲ್ಲಿವೆ. ಬೆಳಗಿನ ತಿಂಡಿಗೆ ಟೊಮೆಟೋ ಸಲಾಡ್, ಸ್ಯಾಂಡ್ವಿಚ್ ಅಥವಾ ಟೋಸ್ಟ್ ಮಾಡಿ ತಿನ್ನಬಹುದು.