ಇತ್ತೀಚೆಗೆ ನಾನಾ ನಮೂನೆಯ ಕುರುಕುಲು ತಿಂಡಿಗಳು ಬಂದಿವೆ. ಮೊದಲೆಲ್ಲಾ ಚೂಡಾ ಅವಲಕ್ಕಿಯನ್ನು ಮನೆ ಮನೆಗಳಲ್ಲಿ ತಯಾರಿಸಿ ಇಟ್ಟುಕೊಳ್ಳಲಾಗುತ್ತಿತ್ತು. ಟೀ ಜೊತೆಗೆ ಚೂಡಾ ಅವಲಕ್ಕಿಯ ಸವಿಯೂ ಇರುತ್ತಿತ್ತು. ಅಲ್ಲದೇ, ಪ್ರವಾಸ ಮೊದಲಾದ ಕಡೆ ಹೋದಾಗಲೂ ಚೂಡಾ ಅವಲಕ್ಕಿ ಜೊತೆಗಿರುತ್ತಿತ್ತು.
ಈಗ ಚೂಡಾ ಅವಲಕ್ಕಿ ಕಡಿಮೆಯಾಗಿದೆ. ಆದರೆ, ಅದನ್ನು ನೆನಪಿಸಿಕೊಂಡರೆ ಬಹುತೇಕರಿಗೆ ತಿನ್ನೋಣ ಎನಿಸುತ್ತದೆ. ಇಂತಹ ಚೂಡಾ ಅವಲಕ್ಕಿಯನ್ನು ಮಾಡುವ ಕುರಿತು ಮಾಹಿತಿ ಇಲ್ಲಿದೆ.
ಚೂಡಾ ಅವಲಕ್ಕಿಗೆ ಬೇಕಾಗುವ ಪದಾರ್ಥಗಳು: ಮೀಡಿಯಂ ಅವಲಕ್ಕಿ-1/2 ಕೆ.ಜಿ., ಕಡಲೆಕಾಯಿ ಬೀಜ-1/4 ಬಟ್ಟಲು, ಹುರಿಗಡಲೆ-1/4 ಬಟ್ಟಲು, ಎಣ್ಣೆ-3 ಚಮಚ, ಅರಿಶಿಣ-1/4 ಚಮಚ, ಸಕ್ಕರೆ-1 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಜೀರಿಗೆ-ಸ್ವಲ್ಪ, ಹೆಚ್ಚಿದ-1/4 ಬಟ್ಟಲು.
ರುಬ್ಬಲು ಬೇಕಾದ ಪದಾರ್ಥಗಳು: ಕರಿಬೇವು ಸ್ವಲ್ಪ, ಕೊತ್ತಂಬರಿ ಸ್ವಲ್ಪ, ಹಸಿಮೆಣಸಿನಕಾಯಿ 6-8, ಬೆಳ್ಳುಳ್ಳಿ-10, ಶುಂಠಿ-ಸ್ವಲ್ಪ. ಎಲ್ಲವನ್ನು ತರಿತರಿಯಾಗಿ ರುಬ್ಬಿಕೊಳ್ಳಿರಿ.
ತಯಾರಿಸುವ ವಿಧಾನ: ಅವಲಕ್ಕಿಯನ್ನು 4 ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿಕೊಳ್ಳಿರಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಜೀರಿಗೆ, ಸಾಸಿವೆ, ಕಡಲೆ ಬೀಜ, ಹುರಿಗಡಲೆ, ಅರಿಶಿಣ ಸೇರಿಸಿರಿ. ಸ್ವಲ್ಪ ಹುರಿದ ನಂತರ ರುಬ್ಬಿದ ಮಿಶ್ರಣ, ಉಪ್ಪು, ಕೊಬ್ಬರಿ ಸೇರಿಸಿ ತಣ್ಣಗಾದ ನಂತರ, ಅವಲಕ್ಕಿ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿರಿ. ಬಳಿಕ ರುಚಿಯನ್ನು ಸವಿಯಿರಿ.