ಬೆಂಗಳೂರು: ಬೆಂಗಳೂರು ಮೆಡಿಕಲ್ ಕಾಲೇಜಿನ 49 ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಇಬ್ಬರು ವಿದ್ಯಾರ್ಥಿನಿಯರಲ್ಲಿ ಕಾಲರಾ ಸೋಂಕು ದೃಢಪಟ್ಟಿದೆ. ಇದರ ಬೆನ್ನಲ್ಲೇ ಬಿಎಂಸಿ ಹಾಸೇಲ್ ನ್ನೇ ವಿದ್ಯಾರ್ಥಿನಿಯರು ತೊರೆಯುತ್ತಿದ್ದಾರೆ.
ಬಿಎಂಸಿ ಹಾಸ್ಟೇಲ್ ನ 49 ವಿದ್ಯಾರ್ಥಿನಿಯರು ವಾಂತಿ-ಭೇದಿ ಅನಾರೋಗ್ಯ ಸಮಸ್ಯೆಯಿಂದ ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದರು. ಹಾಸ್ಟೇಲ್ ನಲ್ಲಿ ಗುಣಮಟ್ಟದ ಆಹಾರ, ಸ್ವಚ್ಛತೆ ಇಲ್ಲದಿರುವುದೂ ಅನಾರೋಗ್ಯಕ್ಕೆ ಕಾರಣವಿರಬಹುದು ಎನ್ನಲಾಗಿತ್ತು. ಇದೇ ವೇಳೆ ಆಸ್ಪತ್ರೆಗೆ ದಾಖಲಾಗಿರುವ ಇಬ್ಬರು ವಿದ್ಯಾರ್ಥಿನಿಯರಲ್ಲಿ ಕಾಲರಾ ಸೋಂಕು ಪತ್ತೆಯಾಗಿದೆ. ಇಂದು ಉಳಿದ 47 ವಿದ್ಯಾರ್ಥಿನಿಯರ ವರದಿ ಬರಬೇಕಿದೆ.
ಕಾಲರಾ ಸೋಂಕಿನಿಂದ ಭಯಗೊಂಡಿರುವ ವಿದ್ಯಾರ್ಥಿನಿಯರು ಬಿಎಂಸಿ ಹಾಸ್ಟೇಲ್ ಖಾಲಿ ಮಾಡುತ್ತಿದ್ದಾರೆ. ಮೆಡಿಕಲ್ ವಿದ್ಯಾರ್ಥಿನಿರು ತಮ್ಮ ಲಗೇಜ್ ಸಮೇತ ಹಾಸ್ಟೇಲ್ ಖಾಲಿಮಾಡಿಕೊಂಡು ಹೊರಟಿದ್ದರೆ ಇನ್ನು ಕೆಲ ವಿದ್ಯಾರ್ಥಿನಿಯರು ಬೇರೊಂದು ಹಾಸ್ಟೇಲ್ ಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಇನ್ನು ಕೆಲವರು ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ಕೆಲ ದಿನಗಳ ಮಟ್ಟಿಗೆ ಹೋಗುತ್ತಿದ್ದಾರೆ.
ಈ ನಡುವೆ ಹಾಸ್ಟೇಲ್ ಗೆ ಭೇಟಿ ನೀಡಿ ಪರಿಶೀಲಿಸಿರುವ ಅಧಿಕಾರಿಗಳು ಆಹಾರ ಹಾಗೂ ಕುಡಿಯುವ ನೀರಿನ ಪರೀಕ್ಷೆ ನಡೆಸಿದ್ದಾರೆ.