ಬೆಳಗಾವಿ: ರಾಜ್ಯದಲ್ಲಿ ರೈಲು, ಬಸ್ ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಕಳ್ಳತನ ಮಾಡುವವರ ಪ್ರಕರಣ ಹೆಚ್ಚುತ್ತಿದ್ದು, ರೈಲಿನಲ್ಲಿ ಚಾಕೊಲೇಟ್ ಗ್ಯಾಂಗ್ ಮತ್ತೆ ಆಕ್ಟೀವ್ ಆಗಿದೆ.
ಬೆಳಗಾವಿ ಹಾಗೂ ಗೋವಾ ನಡುವೆ ಸಂಚರಿಸುವ ರೈಲಿನಲ್ಲಿ ಈ ಗ್ಯಾಂಗ್ ಕಾಣಿಸಿಕೊಳ್ಳುತ್ತಿದ್ದು, ಪ್ರಯಾಣಿಕರಂತೆ ರೈಲು ಹತ್ತುವ ಗ್ಯಾಂಗ್, ಬೋಗಿಯಲ್ಲಿ ಸಹ ಪ್ರಯಾಣಿಕರ ಪರಿಚಯ ಮಾಡಿಕೊಂಡು ಬಳಿಕ ಕೆಲ ಸಮಯದಲ್ಲಿ ಕೆಮಿಕಲ್ ಯುಕ್ತ ಚಾಕೊಲೇಟ್ ನ್ನು ಕೊಟ್ಟು ಪ್ರಜ್ಞೆ ತಪ್ಪುವಂತೆ ಮಾಡಿ, ಪ್ರಯಾಣಿಕರ ಬಳಿ ಇದ್ದ ಮೊಬೈಲ್, ಹಣ, ಒಡವೆ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತೆ.
ಮೂರು ವರ್ಷಗಳ ಹಿಂದೆ ಚಾಕೊಲೇಟ್ ಗ್ಯಾಂಗ್ ಕಳ್ಳರನ್ನು ರೈಲ್ವೆ ಪೊಲೀಸರು ಹಿಡಿದಿದ್ದರು. ಆದರೆ ಈಗ ಇಂತದ್ದೇ ಗ್ಯಾಂಗ್ ಮತ್ತೆ ಆಕ್ಟೀವ್ ಆಗಿದ್ದು, ರೈಲ್ವೆ ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿದೆ.
ಎರಡು ದಿನಗಳ ಹಿಂದೆ ಈ ಗ್ಯಾಂಗ್ ಗೋವಾದಿಂದ ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯ ಚೆರ್ವಾ ಗ್ರಾಮಕ್ಕೆ ಹೊರಟಿದ್ದ 8 ಜನ ಪ್ರಯಾಣಿಕರನ್ನು ಯಾಮಾರಿಸಿ, ಹಣ, ಮೊಬೈಲ್ ದೋಚಿ ಪರಾರಿಯಾಗಿದೆ. ರೈಲಿನಲ್ಲಿ ಚಾಕೊಲೇಟ್ ತಿಂದ ಪ್ರಯಾಣಿಕರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.