ಚಿತ್ರದುರ್ಗ: ಹಣವನ್ನು ಮೂರು ಪಟ್ಟು ಹೆಚ್ಚು ಮಾಡಿಕೊಡುವುದಾಗಿ ಹೇಳಿದ್ದ ಭೂಪ 17 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
ಚಿತ್ರದುರ್ಗದ ಜಯಲಕ್ಷ್ಮೀ ಬಡಾವಣೆ ನಿವಾಸಿ ಶಂಕರಗೌಡ ಎಂಬಾತ ಮಹಾರಾಷ್ಟ್ರ ಮೂಲದ ಮೂವರಿಗೆ ವಂಚಿಸಿದ್ದಾನೆ. ನಿಮ್ಮ ಹಣವನ್ನು ಮೂರು ಪಟ್ಟು ಹೆಚ್ಚು ಮಾಡಿ ಕೊಡುತ್ತೇನೆ ಎಂದು ನಂಬಿಸಿ ಮಹೇಶ್ ಕಾಟ್ಕರ್, ಸಚಿನ್ ಕಾಂಬಳೆ, ಅನಘ ಸುನಿಲ್ ಧವಳೆ ಎಂಬುವವರಿಂದ 17 ಲಕ್ಷದ 66 ಸಾವಿರ ರೂಪಾಯಿ ಪಡೆದುಕೊಂಡಿದ್ದಾನೆ. ಹಣ ಕೇಳಿದರೆ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ.
ಶಂಕರಗೌಡನನ್ನು ಕೊಟ್ಟ ಹಣವನ್ನು ಹಿಂತಿರುಗಿಸುವಂತೆ ಮೂವರು ಪಟ್ಟು ಹಿಡಿದಿದ್ದಾರೆ. ಆಗ 100, 200, 500 ಮುಖ ಬೆಲೆಯ ನಕಲಿ ನೋಟುಗಳನ್ನು ಅವರ ಕೈಗಿಟ್ಟಿದ್ದಾನೆ. ಆರೋಪಿ ನೀಡಿದ ನೋಟಿಸ್ ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲು ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದಿದೆ. ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಆರೋಪಿಯನ್ನು ಹಿಡಿದು ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಮಹೇಶ್ ಕಾಟ್ಕರ್ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾನೆ.
ಹಣ ಕಳೆದುಕೊಂಡವರು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಶಂಕರಗೌಡನನ್ನು ಬಂಧಿಸಿದ್ದಾರೆ. ಆತನ ಕಾರಿನಲ್ಲಿದ್ದ ಟ್ರಂಕ್ ಗಳಲ್ಲಿ 50 ಲಕ್ಷ ರೂಪಾಯಿ ನಕಲಿ ನೋಟುಗಳು ಪತ್ತೆಯಾಗಿದ್ದು, ತನಿಖೆ ಮುಂದುವರೆಸಿದ್ದಾರೆ.