ಚಿತ್ರದುರ್ಗ: ಕೆಲ ದಿನಗಳ ಹಿಂದಷ್ಟೇ ಮೆಟ್ರೋ ರೈಲು, ಡಿಆರ್ ಡಿಓ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಯುವಕ ಇದೀಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾನೆ.
ಎಲೆಕ್ಟ್ರಿಕ್ ವೈರಿಂಗ್ ಮೂಲಕ ಮೆಟ್ರೋ, ಡಿಆರ್ ಡಿಓ, ಐಐಎಸ್ ಸಿ ಸ್ಫೋಟಿಸುವುದಾಗಿ ಚಳ್ಳಕೆರೆ ಮೂಲದ ಯುವಕನೊಬ್ಬ ಬೆದರಿಕೆ ಹಾಕಿದ್ದ. ಇದೀಗ ಅದೇ ಯುವಕ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಕ್ಷಮೆಯಾಚಿಸಿದ್ದಾನೆ.
ಪೃಥ್ವಿರಾಜ್ ಎಂಬ ಯುವಕ ಕೆಲ ದಿನಗಳ ಹಿಂದೆ ಮೆಟ್ರೋ, ಡಿಆರ್ ಡಿಓ, ಐಐಎಸ್ ಸಿ ಬ್ಲಾಸ್ಟ್ ಮಾಡುವುದಾಗಿ ಹೆದರಿಸಿದ್ದ. ಕೂಡಲೇ ಪೊಲೀಸರು ಯುವಕನನ್ನು ಪತ್ತೆಮಾಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಅದೇ ಯುವಕ ಇನ್ನೊಂದು ವಿಡಿಯೋ ಬಿಡುಗಡೆ ಮಾಡಿ ಕ್ಷಮೆ ಕೋರಿದ್ದಾನೆ. ಅಲ್ಲದೆ ಸ್ಫೋಟಿಸುವುದಾಗಿ ತಾನು ಹೇಳಲು ಕಾರಣವೇನು ಎಂಬುದನ್ನು ಬಿಚ್ಚಿಟ್ಟಿದ್ದಾನೆ.
ತನ್ನ ತಾಯಿ ಕೆಲ ದಿನಗಳ ಹಿಂದೆ ಯಾವುದೇ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅಮ್ಮ ನಾಪತ್ತೆಯಾಗಿದ್ದಾರೆ ಎಂದು ಕೇಸ್ ದಾಖಲಿಸಲು ಹೋದಾಗ ಪೊಲೀಸರು ಸ್ಪಂದಿಸಿಲ್ಲ. ಊರಿಗೆ ಬಂದಾಗ ಅಮ್ಮ ಕೆಲ ವಿಷಯ ಹೇಳಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಪೊಲೀಸರು ಅಮ್ಮನ ಮುಂದೆ ನನ್ನನ್ನು ಹೊಡೆದಿದ್ದರು. ಇದನ್ನು ನೋಡಿ ನನ್ನ ತಾಯಿ ಕಣ್ಣೀರಿಟ್ಟಿದ್ದರು. ಇದರಿಂದ ಬೇಸತ್ತು ಕೋಪದಲ್ಲಿ ಮೆಟ್ರೋ ಸ್ಫೋಟಿಸುವುದಾಗಿ ಹೇಳಿದ್ದೆ. ನನಗೆ ಎಲೆಕ್ಟ್ರಿಕ್ ಕೆಲಸ ಬಿಟ್ಟು ಬೇರೇನೂ ಗೊತ್ತಿಲ್ಲ. ಹಾಗಾಗಿ ಎಲೆಕ್ಟ್ರಿಕ್ ವೈರಿಂಗ್ ಮೂಲಕ ಬ್ಲಾಸ್ಟ್ ಮಾಡುತ್ತೇನೆ ಎಂದಿದ್ದೆ. ಆ ರೀತಿ ಮಾಡುವ ಉದ್ದೇಶ ಯಾವತ್ತೂ ಇಲ್ಲ. ಆದರೆ ಕೋಪದ ಬರದಲ್ಲಿ ಹಾಗೆ ಹೇಳಿದ್ದು, ಕ್ಷಮೆ ಕೇಳುತ್ತಿರುವುದಾಗಿ ಯುವಕ ಹೇಳಿದ್ದಾನೆ.