ಚಿತ್ರದುರ್ಗ: ಚೆಕ್ ಮತ್ತು ದಾಖಲೆ ಪತ್ರಗಳಿಗೆ ಸಹಿ ಹಾಕಲು ಅನುಮತಿ ಕೋರಿ ಚಿತ್ರದುರ್ಗ ಮುರುಘಾ ಮಠದ ಮುರುಘಾ ಸ್ವಾಮೀಜಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಸ್ವಾಮೀಜಿ ಮಠದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಚೆಕ್ ಹಾಗೂ ದಾಖಲೆಗಳಿಗೆ ಸಹಿ ಹಾಕಲು ಅನುಮತಿ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮಠದ ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಇತರೆ ಶಿಕ್ಷಕರು, ಸಿಬ್ಬಂದಿಗೆ ವೇತನ ನೀಡಲು ಚೆಕ್ ಗಳಿಗೆ ಸಹಿ ಹಾಕಲು ಅನುಮತಿ ನೀಡುವಂತೆ ಕೋರಲಾಗಿದೆ.
ಜೈಲಿನಿಂದಲೇ ಚೆಕ್ ಮತ್ತು ದಾಖಲೆಗಳಿಗೆ ಸಹಿ ಹಾಕಲು ಅನುಮತಿ ಕೋರಿ ಸ್ವಾಮೀಜಿ ಪರ ವಕೀಲರು ಚಿತ್ರದುರ್ಗದ ಸೆಷನ್ಸ್ ಕೋರ್ಟ್ ಗೆ ಮನವಿ ಮಾಡಿದ್ದರೂ ಅನುಮತಿ ನಿರಾಕರಿಸಲಾಗಿತ್ತು. ಎಸ್.ಜೆ.ಎಂ. ವಿದ್ಯಾಪೀಠದ ಸುಮಾರು 5000 ನೌಕರರಿಗೆ ವೇತನ ನೀಡಲು ಅಧ್ಯಕ್ಷರಾದ ಶಿವಮೂರ್ತಿ ಮುರುಘಾ ಶರಣರ ಸಹಿ ಅಗತ್ಯವಾಗಿದೆ.
ಆದರೆ, ಸ್ವಾಮೀಜಿ ಚೆಕ್ ಗೆ ಸಹಿ ಹಾಕಲು ಅಧಿಕಾರ ನೀಡಿದ್ದಲ್ಲಿ ಮುಂದೆ ಮಠದ ಆಸ್ತಿಪಾಸ್ತಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಪ್ರಭಾರ ಸ್ವಾಮೀಜಿ ಮತ್ತು ಆಡಳಿತಾಧಿಕಾರಿ ನೇಮಕ ಮಾಡಲಾಗಿದ್ದು, ಮುರುಘಾ ಶರಣರೇ ಸಹಿ ಹಾಕುವ ಅಧಿಕಾರ ಅಗತ್ಯವಿಲ್ಲ ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು. ಹೀಗಾಗಿ ಚೆಕ್ ಗಳಿಗೆ ಸಹಿ ಹಾಕಲು ಶ್ರೀಗಳಿಗೆ ಅವಕಾಶ ನಿರಾಕರಿಸಲಾಗಿತ್ತು.
ಹೀಗಾಗಿ ಸ್ವಾಮೀಜಿ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಹಿ ಇಲ್ಲದೇ ವಿದ್ಯಾ ಸಂಸ್ಥೆಯ ಶಿಕ್ಷಕರು ಮತ್ತು ಸಿಬ್ಬಂದಿಗೆ ವೇತನ ಸಿಗದೇ ಪರದಾಡುವಂತಾಗಿದೆ.