ಚಿತ್ರದುರ್ಗ: ಸುಖಸಂಸಾರ ನಡೆಸುತ್ತಿದ್ದ ದಂಪತಿ ನಡುವೆ ಮೂರನೇ ವ್ಯಕ್ತಿ ಎಂಟ್ರಿಯಾಗಿ ಮಹಿಳೆಯ ಬದುಕನ್ನೇ ಬೀದಿಗೆ ತಂದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆದಿದೆ.
ಹೊಸದುರ್ಗ ರೋಡ್ ನಿವಾಸಿ ದಿವ್ಯ 2015ರಲ್ಲಿ ರಾಜು ಎಂಬ ಚಿಕನ್ ವ್ಯಾಪಾರಿಯನ್ನು ವಿವಾಹವಾಗಿ ದಂಪತಿ ಚನ್ನಾಗಿಯೇ ಇದ್ದರು. ಈ ಮಧ್ಯೆ ವಸಂತ್ ನಾಯ್ಕ್ ಎಂಬಾತ ಗಂಡ-ಹೆಂಡತಿ ನಡುವೆ ಎಂಟ್ರಿಯಾಗಿದ್ದಾನೆ. ದಿವ್ಯಾಳ ಬೆನ್ನು ಬಿದ್ದ ವಸಂತ್ ನಾಯ್ಕ್, ಪತಿಗೆ ಡಿವೋರ್ಸ್ ಕೊಡುವಂತೆ ಹೇಳಿ ತನ್ನ ಜೊತೆ ಬಾಳುವಂತೆ ಮನವೊಲಿಸಿದ್ದಾನೆ. ಪತಿ ಬಿಟ್ಟು ವಸಂತ್ ನಾಯ್ಕ್ ನನ್ನು ನಂಬಿದ ದಿವ್ಯಾ, ಪತಿಗೆ ವಿಚ್ಛೇದನ ನೀಡಿದ್ದಾಳೆ.
ಬಳಿಕ ವಸಂತ್ ನಾಯ್ಕ್ ದಿವ್ಯಾಳ ಜೊತೆ ಅವಳಹಟ್ಟಿ ಗ್ರಾಮದಲ್ಲಿ ವಾಸವಾಗಿದ್ದ. ಕೆಲ ವರ್ಷಗಳಲ್ಲಿ ದಿವ್ಯಾಳಿಗೆ ವಸಂತ್ ನಾಯ್ಕ್ ಗೆ ಮೊದಲ ಪತ್ನಿ ಇರುವುದು ಗೊತ್ತಾಗಿದೆ. ಇತ್ತ ದಿವ್ಯಾ ಗರ್ಭಿಣಿಯೂ ಆಗಿದ್ದಾಳೆ. ಗರ್ಭಪಾತ ಮಾಡಿಸುವಂತೆ ಗಲಾಟೆ ಆರಂಭಿಸಿದ್ದಾನೆ. ವಸಂತ್ ನಾಯ್ಕ್ ತನ್ನ ಮೊದಲ ಪತ್ನಿ ಜೊತೆ ಸೇರಿ ದಿವ್ಯಾ ಮೇಲೆ ದೌರ್ಜನ್ಯ ನಡೆಸಲಾರಂಭಿಸಿದ್ದಾನೆ. ಅಲ್ಲದೇ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸುವಂತೆ ಒತ್ತಾಯಿಸಿದ್ದಾನೆ.
ವಸಂತ್ ನಾಯ್ಕ್ ಚಿತ್ರಹಿಂಸೆಗೆ ಬೇಸತ್ತ ದಿವ್ಯಾ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಆದರೆ ಪೊಲೀಸರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ವಸಂತ್ ನಾಯ್ಕ್ ತನ್ನನ್ನು ಎರಡು ತಿಂಗಳ ಹಿಂದೆ ಬಿಟ್ಟು ಹೋಗಿದ್ದಾನೆ ಎಂದು ದಿವ್ಯಾ ಆರೋಪಿಸಿದ್ದಾಳೆ. ಆರೋಪಿ ವಸಂತ್ ನಾಯ್ಕ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.