ಮಾರ್ಚ್ 8ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಅದಕ್ಕೂ ಮುನ್ನವೇ ಭಾರತದ ಆನ್ – ಚೈನ್ ಸಾಮಾಜಿಕ ತಾಣ ‘ಚಿಂಗಾರಿ’ ತನ್ನ ಮಹಿಳಾ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ತಿಂಗಳಿಗೆ ಎರಡು ದಿನಗಳ ಕಾಲ ವೇತನ ಸಹಿತ ಮುಟ್ಟಿನ ರಜೆಯನ್ನು ಘೋಷಿಸಲಾಗಿದೆ.
ಮಹಿಳಾ ಉದ್ಯೋಗಿಗಳ ಋತುಚಕ್ರದ ಸಮಸ್ಯೆಯನ್ನು ಅರಿತು ಅವರಿಗಾಗಿ ತಿಂಗಳಲ್ಲಿ ಎರಡು ದಿನಗಳ ಕಾಲ ವೇತನ ಸಹಿತ ರಜೆ ನೀಡಲಾಗುತ್ತಿದ್ದು, ಇದು ಮಾರ್ಚ್ 6 ರ ಇಂದಿನಿಂದಲೇ ಜಾರಿಗೆ ಬಂದಿದೆ. ‘ಚಿಂಗಾರಿ’ ಯ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಮಹಿಳೆಯರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಚಿಂಗಾರಿ ಅಪ್ಲಿಕೇಶನ್ ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಸಾವಿರಾರು ಮಂದಿ ಗೃಹಿಣಿಯರು ಈ ಫ್ಲಾಟ್ ಫಾರಂ ಪ್ರಯೋಜನ ಪಡೆಯುತ್ತಿದ್ದು, ಇದೀಗ ಹೆಚ್ಚುವರಿ ಯಾಗಿ ಶ್ರೇಣಿ ಎರಡು, ಮೂರು ಮತ್ತು ನಾಲ್ಕನೇ ಹಂತದ ಪ್ರದೇಶಗಳಿಗೂ ಸೇವೆಯನ್ನು ವಿಸ್ತರಿಸಲು ಮುಂದಾಗಿದೆ.
ಇನ್ನು ‘ಚಿಂಗಾರಿ’ ಕೈಗೊಂಡಿರುವ ಈ ತೀರ್ಮಾನ ಕುರಿತಂತೆ ಮಾತನಾಡಿರುವ ಸಹ ಸಂಸ್ಥಾಪಕ ಮತ್ತು ಸಿಇಒ ಸುಮಿತ್ ಘೋಷ್, ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಪ್ರಾಮುಖ್ಯತೆಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಅವರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇವೆ. ಇದು ಅವರಿಗೆ ಸಹಾಯಕವಾಗುತ್ತದೆ ಎಂದು ಭಾವಿಸಿದ್ದೇವೆ ಎಂದಿದ್ದಾರೆ.
ಇನ್ನು ಮಾರ್ಚ್ 8ರ ವಿಶ್ವ ಮಹಿಳಾ ದಿನಾಚರಣೆಯಂದು ಮುಂಬೈನಲ್ಲಿ ‘ಚಿಂಗಾರಿ’ ಮಹಿಳಾ ಬೈಕ್ ರ್ಯಾಲಿಯನ್ನು ಆಯೋಜಿಸುತ್ತಿದ್ದು, ಇದರಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.