ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಶಂಕಿತ ಚೀನಾ ಮಹಿಳೆಯನ್ನು ಬಿಹಾರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ದಲೈ ಲಾಮಾ ಅವರ ಭೇಟಿಯ ಸಂದರ್ಭದಲ್ಲಿ ಬಿಹಾರದ ಬೋಧಗಯಾದಲ್ಲಿ ಭದ್ರತಾ ಎಚ್ಚರಿಕೆ ನೀಡಲಾಗಿದ್ದು, ಬಿಹಾರ ಪೊಲೀಸರ ಪ್ರಕಾರ, ಆಕೆಯನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಬೋಧಗಯಾ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸಲಾಗುತ್ತಿದೆ.
ಎಡಿಜಿ(ಪ್ರಧಾನ ಕಛೇರಿ) ಜೆ.ಎಸ್. ಗಂಗ್ವಾರ್ ಮಾತನಾಡಿ, ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರಿಗೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಪೊಲೀಸರು ಶಂಕಿತ(ಚೀನೀ) ಮಹಿಳೆಯನ್ನು ಬೋಧಗಯಾದಲ್ಲಿ ಬಂಧಿಸಿದ್ದಾರೆ.
87 ವರ್ಷ ವಯಸ್ಸಿನ ಟಿಬೆಟಿಯನ್ ಆಧ್ಯಾತ್ಮಿಕ ಗುರು ಡಿಸೆಂಬರ್ 22 ರಂದು ಬೋಧಗಯಾಗೆ ಆಗಮಿಸಿದ್ದರು. ಫೆಬ್ರವರಿ 1 ರವರೆಗೆ ಇರಲಿದ್ದಾರೆ. ಬುದ್ಧನ ಬೋಧನೆಗಳು ಮತ್ತು ಧ್ಯಾನಗಳನ್ನು ಒಳಗೊಂಡಿರುವ 10 ದಿನದ ಉತ್ಸವವಾದ ಕಲ್ಚಕ್ರಕ್ಕಾಗಿ ಬೋಧಗಯಾದಲ್ಲಿ ದಲೈ ಲಾಮಾ ಉಪಸ್ಥಿತರಿದ್ದಾರೆ. ಬೋಧ್ ಗಯಾದಲ್ಲಿ ಸಾಂಗ್ ಕ್ಸಿಯೋಲಾನ್ ಎಂದು ಹೆಸರಿಸಲಾದ ಚೀನಾದ ಮಹಿಳೆಯ ಕೂಡ ಭಾಗಿಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಬುಧವಾರ ಸಂಜೆ, ಗಯಾ ಪೊಲೀಸರು ಮಹಿಳೆಯ ರೇಖಾಚಿತ್ರ ಮತ್ತು ಆಕೆಯ ಪಾಸ್‌ಪೋರ್ಟ್ ಮತ್ತು ವೀಸಾ ಮಾಹಿತಿಯನ್ನು ಬಿಡುಗಡೆ ಮಾಡಿದರು. ದಲೈ ಲಾಮಾ ಅವರು ತಂಗಿರುವ ಗಯಾದಲ್ಲಿನ ಟಿಬೆಟಿಯನ್ ಮಠವನ್ನು ಕೋಟೆಯನ್ನಾಗಿ ಮಾಡಲಾಗಿದೆ. ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಲಾಮಾಗಳಿಗೆ ಪ್ರವೇಶಕ್ಕಾಗಿ ವೈಯಕ್ತಿಕ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಅಪಾಯದ ಗ್ರಹಿಕೆಯಿಂದಾಗಿ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ. ಕಾಳಚಕ್ರ ಮೈದಾನ ಮತ್ತು ಸುತ್ತಮುತ್ತ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.