ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿರುವ ಪ್ರವಾಸಿ ಗ್ರಾಮವೊಂದು ತನ್ನ ರಮಣೀಯ ದೃಶ್ಯಾವಳಿ ಮತ್ತು ಅದ್ಬುತ ಹಿಮಪಾತಕ್ಕೆ ಹೆಸರುವಾಸಿಯಾಗಿದೆ. ಆದರೆ ಈ ಬಾರಿ ಚಂದ್ರನ ಹೊಸ ವರ್ಷದ ರಜಾದಿನಗಳಲ್ಲಿ ನಿರೀಕ್ಷೆಗಿಂತ ಬೆಚ್ಚಗಿನ ತಾಪಮಾನದಿಂದಾಗಿ, ಗ್ರಾಮವು ಎಂದಿನಂತೆ ಹಿಮಪಾತವನ್ನು ಕಾಣಲಿಲ್ಲ.
ಪ್ರವಾಸಿಗರಿಗೆ “ಹಿಮಮಯ” ಅನುಭವವನ್ನು ನೀಡುವ ಉದ್ದೇಶದಿಂದ, ಗ್ರಾಮಸ್ಥರು ಹತ್ತಿ ಮತ್ತು ಸೋಪಿನ ನೀರನ್ನು ಬಳಸಿ ಹಿಮದ ಭ್ರಮೆಯನ್ನು ಸೃಷ್ಟಿಸಲು ಯೋಜಿಸಿದ್ದಾರೆ. ಆದರೆ ಈ ಯೋಜನೆ ವಿಫಲವಾಗಿದ್ದು ಆನ್‌ಲೈನ್‌ನಲ್ಲಿ ವ್ಯಾಪಕ ಟೀಕೆಗೆ ಗುರಿಯಾಯಿತು.
ಚೆಂಗ್ಡು ಹಿಮ ಗ್ರಾಮ ಯೋಜನೆಯು ವೀಚಾಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ಕಡಿಮೆ ಹಿಮಪಾತಕ್ಕೆ ಕಾರಣವನ್ನು ವಿವರಿಸಿದೆ. ಬೆಚ್ಚಗಿನ ಹವಾಮಾನದಿಂದಾಗಿ ನಿರೀಕ್ಷಿತ ಪ್ರಮಾಣದ ಹಿಮಪಾತವಾಗಲಿಲ್ಲ. ಹೀಗಾಗಿ, “ಹಿಮಮಯ” ವಾತಾವರಣವನ್ನು ಸೃಷ್ಟಿಸಲು ಹತ್ತಿಯನ್ನು ಬಳಸಲಾಯಿತು. ಆದರೆ ಇದು “ನಿರೀಕ್ಷಿತ ಪರಿಣಾಮವನ್ನು ಸಾಧಿಸಲಿಲ್ಲ, ಭೇಟಿ ನೀಡಲು ಬಂದ ಪ್ರವಾಸಿಗರ ಮೇಲೆ ಬಹಳ ಕೆಟ್ಟ ಪ್ರಭಾವ ಬೀರಿತು” ಎಂದು ಅವರು ಒಪ್ಪಿಕೊಂಡಿದ್ದಾರೆ.
ನಿರಾಶೆಗೊಂಡ ಪ್ರವಾಸಿಗರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ವೀಚಾಟ್‌ನಲ್ಲಿ ಹರಿದಾಡಿದ ಫೋಟೋಗಳು ಹತ್ತಿ ಹಾಳೆಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ತೋರಿಸಿವೆ, ಹಸಿರು ಪ್ರದೇಶವನ್ನು ಭಾಗಶಃ ಮಾತ್ರ ಮುಚ್ಚಿದ್ದದ್ದು, ಮನೆಗಳು ದಪ್ಪವಾದ ಹಿಮ ಹೊದಿಕೆಯಿಂದ ಮುಚ್ಚಲ್ಪಟ್ಟಂತೆ ಕಂಡವು, ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದು ಕೇವಲ ಹತ್ತಿ ಎಂದು ನೆಟಿಜನ್ ಒಬ್ಬರು ವಿವರಿಸಿದ್ದಾರೆ. “ಹಿಮವಿಲ್ಲದ ಹಿಮ ಗ್ರಾಮ” ಎಂದು ಇನ್ನೊಬ್ಬ ಬಳಕೆದಾರರು ಸರಳವಾಗಿ ಹೇಳಿದ್ದಾರೆ.
ಆನ್‌ಲೈನ್ ಟೀಕೆಗಳ ನಂತರ, ಪ್ರವಾಸಿ ಪ್ರದೇಶವು ಹತ್ತಿಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿತು ಮತ್ತು ಸೈಟ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಗ್ರಾಮವು “ಕ್ಷಮೆಯಾಚನೆ” ಮಾಡಿ ಪ್ರವಾಸಿಗರು ಮರುಪಾವತಿಗೆ ಅರ್ಹರು ಎಂದು ತಿಳಿಸಿದೆ.