ಮದುವೆಯಾಗುವ ವಯಸ್ಸಾದರೂ ಮದುವೆಯಾಗದಿದ್ದರೆ ಜನರು ಕೇಳುವ ಪ್ರಶ್ನೆಗಳಿಗೆ ತಲೆಚಿಟ್ಟು ಹಿಡಿಯುತ್ತದೆ. ಇಂಥದ್ದೇ ಒಂದು ವಿಷಯವನ್ನು ಇಟ್ಟುಕೊಂಡು ಚೀನೀ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ Weibo ನಲ್ಲಿ ಒಂದು ಚರ್ಚೆ ಮಾಡಲಾಗಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಉತ್ತರ ಚೀನಾದ 24 ವರ್ಷದ ಯುವತಿ ಜನವರಿ 24 ರಂದು ತನ್ನ ತಾಯಿ ಮತ್ತು ವಯಸ್ಸಾದ ಸಂಬಂಧಿಕರೊಂದಿಗೆ ಚಾಟ್ ಮಾಡುತ್ತಿರುವ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಯಾರಾದರೂ ತನ್ನ ಮದುವೆಯ ಬಗ್ಗೆ ಕೇಳಿದರೆ, ಮದುವೆಯಾಗುವುದಕ್ಕಿಂತ ಶವಪೆಟ್ಟಿಗೆಯಲ್ಲಿ ಶಾಂತಿಯನ್ನು ಕಂಡುಕೊಳ್ಳಲು ಬಯಸುವುದಾಗಿ ಹತಾಶೆಯಿಂದ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು.
ಈ ವೀಡಿಯೊವನ್ನು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಶೇರ್ ಮಾಡಿಕೊಂಡಿದೆ. ಯಾರಾದರೂ ಮದುವೆಯ ಬಗ್ಗೆ ಕೇಳಿದರೆ ನನ್ನ ಉತ್ತರ ಇದೇ ಎಂದಿದ್ದಾಳೆ ಯುವತಿ.
“ಶವಪೆಟ್ಟಿಗೆಯಲ್ಲಿ ಮಲಗಿರುವ ನಾನು ಇನ್ನೂ ಹೆಚ್ಚು ಶಾಂತಿಯಿಂದ ಇರುತ್ತೇನೆ. ಸಾವಿನ ನಂತರ ಫೋಟೋ ಗೋಡೆಯ ಮೇಲೆ ನೇತುಹಾಕುವುದು ಮದುವೆಗಿಂತಲೂ ಸುರಕ್ಷಿತವಾಗಿದೆ ಎಂದು ಆಕೆ ಹೇಳುತ್ತಾಳೆ. ಬೇರೆಯವರಿಗೋಸ್ಕರ ನಾನು ಯಾಕೆ ಮದುವೆಯಾಗಬೇಕು ಎಂದು ಪ್ರಶ್ನಿಸುತ್ತಾಳೆ.
“ಮದುವೆಯಾಗುವುದು ಮತ್ತು ಮಕ್ಕಳನ್ನು ಹೊಂದುವುದು ಚೀನಾದ ಮಹಿಳೆಯರಿಗೆ ಸಾಂಪ್ರದಾಯಿಕ ಸದ್ಗುಣವಾಗಿದೆ” ಎಂದು ಯುವತಿಯರು ಹೇಳುವುದನ್ನು ಕೇಳಬಹುದು. ಈ ವಿಡಿಯೋ ವೈರಲ್ ಆಗಿದ್ದು, ಹಲವರು ಯುವತಿಯ ಮಾತಿಗೆ ಸಮ್ಮತಿ ಸೂಚಿಸಿದ್ದಾರೆ.