ಚೀನಾ ಆಟಿಕೆಗಳಿಂದ ಮಕ್ಕಳಿಗೆ ಗಂಭೀರ ಕಾಯಿಲೆ ಬರಬಹುದಾದ ಸಾಧ್ಯತೆಯಿದೆ. ರಾಸಾಯನಿಕ ಪದಾರ್ಥ ಬಳಕೆಯಿಂದಾಗಿ ಮಕ್ಕಳ ಅನ್ನನಾಳ, ಶ್ವಾಸಕೋಶ ರೋಗ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳು ಬರಬಹುದು ಎಂದು ತಜ್ಞರು ಹೇಳಿದ್ದಾರೆ.
ಚೀನಾ ಆಟಿಕೆಗಳು ಕಳಪೆಯಾಗಿದ್ದು, ಮಕ್ಕಳ ಸುರಕ್ಷತೆಯ ಕ್ರಮಗಳನ್ನು ಪಾಲನೆ ಮಾಡುತ್ತಿಲ್ಲ. ಅಪಾಯಕಾರಿ ರಾಸಾಯನಿಕ ಅಂಶಗಳನ್ನು ಚೀನಾ ಆಟಿಕೆ ಹೊಂದಿವೆ ಎಂದು ಅಮೆರಿಕ ತಿಳಿಸಿದೆ. ಮಾತ್ರವಲ್ಲ, ಇಂತಹ ಆಟಿಕೆಗಳಿಗೆ ನಿರ್ಬಂಧ ವಿಧಿಸಿದೆ. ಭಾರತದಲ್ಲಿ ಮಕ್ಕಳ ಆಟಿಕೆಗಳಲ್ಲಿ ಚೀನಾ ಪಾರುಪತ್ಯ ಹೊಂದಿದೆ.
ಚೀನಾ ಆಟಿಕೆಗಳಲ್ಲಿ ಅತಿಯಾದ ರಾಸಾಯನಿಕ ಇರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರಲಿದ್ದು, ಕ್ಯಾನ್ಸರ್, ಚರ್ಮರೋಗ ಮತ್ತು ಬಹುಕಾಲದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಕಳಪೆ ಪ್ಲಾಸ್ಟಿಕ್, ರಾಸಾಯನಿಕ ವಸ್ತುಗಳಿಂದ ಆಟಿಕೆಗಳನ್ನು ಮಾಡುವುದರಿಂದ ಮಕ್ಕಳು ಅವುಗಳನ್ನು ಮುಟ್ಟುವುದರಿಂದ ಮತ್ತು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ರಾಸಾಯನಿಕ ದೇಹದೊಳಗೆ ಸೇರುತ್ತದೆ. ಇದರಿಂದ ಚರ್ಮ ಕಾಯಿಲೆಗಳು ಬರುತ್ತವೆ. ಬ್ಯಾಟರಿಗಳನ್ನು ಆಕಸ್ಮಿಕವಾಗಿ ಮಕ್ಕಳು ನುಂಗಿದರೆ ಅಪಾಯಕಾರಿ ಕೆಮಿಕಲ್ ಅನ್ನನಾಳ ಸೇರಿಕೊಂಡು ರಂಧ್ರ ಉಂಟಾಗುತ್ತದೆ. ಇದರಿಂದ ಜೀವಕ್ಕೆ ಅಪಾಯ ತರುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಗುಣಮಟ್ಟದ ವಸ್ತುಗಳನ್ನು ಬಳಸದೆ ಕಳಪೆ ದರ್ಜೆಯ ಬಣ್ಣ, ಪ್ಲಾಸ್ಟಿಕ್, ಬಿಡಿಭಾಗಗಳನ್ನು ಚೀನಾ ಆಟಿಕೆಗಳಲ್ಲಿ ಬಳಸಲಾಗುತ್ತದೆ. ಚೀನಾ ಕಂಪನಿ ಆಟಿಕೆಗಳು ಕಡಿಮೆ ಬೆಲೆಯ ಕಾರಣಕ್ಕೆ ಹೆಚ್ಚಿನವರು ಇವುಗಳನ್ನು ಖರೀದಿಸುತ್ತಾರೆ. ಇದರಿಂದಾಗಿ ಮಕ್ಕಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗಿದೆ.