ಗಡಿಭಾಗದಲ್ಲಿ ಸದಾ ಕ್ಯಾತೆ ತೆಗೆಯುತ್ತಿರುವ ಚೀನಾ ಸೈನಿಕರು ಈ ಹಿಂದೆ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಚಕಮಕಿ ನಡೆಸಿದ್ದು, ನಮ್ಮ ಯೋಧರಿಂದ ಅವರಿಗೆ ತಕ್ಕ ಪ್ರತ್ಯುತ್ತರ ಸಿಕ್ಕಿತ್ತು. ಗಾಲ್ವಾನ್ ಕಣಿವೆ ವಿವಾದ ತಣ್ಣಗಾಗಿರುವ ಮಧ್ಯೆ ಇದೀಗ ಚೀನಾ ಸೈನಿಕರು ಮತ್ತೊಮ್ಮೆ ಉದ್ಧಟತನ ಮೆರೆದಿದ್ದಾರೆ.
ಜುಲೈ 6ರಂದು ಬೌದ್ಧ ಧರ್ಮಗುರು ದಲೈಲಾಮಾ ಅವರ ಹುಟ್ಟುಹಬ್ಬವನ್ನು ಲಡಾಕ್ ನ ಡೆನ್ಚುಕ್ ಪ್ರದೇಶದ ಗ್ರಾಮಗಳಲ್ಲಿ ಸಾರ್ವಜನಿಕರು ಆಚರಣೆ ಮಾಡುತ್ತಿದ್ದ ವೇಳೆ ಚೀನಾ ಸೈನಿಕರು ಹಾಗೂ ನಾಗರಿಕರು ಐದು ವಾಹನಗಳಲ್ಲಿ ಪ್ರವೇಶಿಸಿ ಬ್ಯಾನರ್ ಪ್ರದರ್ಶನ ಮಾಡಿದ್ದಾರೆ ಎಂದು ಹೇಳಲಾಗಿದೆ.
ದಲೈಲಾಮ ಅವರನ್ನು ಚೀನಾ ವಿರೋಧಿಸಿಕೊಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬವನ್ನು ಭಾರತದ ಲಡಾಕ್ ನ ಕೆಲ ಗ್ರಾಮಗಳಲ್ಲಿ ಅನುಯಾಯಿಗಳು ಆಚರಣೆ ಮಾಡುತ್ತಿದ್ದ ವೇಳೆ ಚೀನಾ ಸೈನಿಕರು ಅಲ್ಲಿಗೆ ಪ್ರವೇಶಿಸಿ ಪ್ರತಿಭಟನೆ ನಡೆಸಿ ಹಿಂದಿರುಗಿದ್ದಾರೆ ಎಂದು ತಿಳಿದುಬಂದಿದೆ.