ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾದಲ್ಲಿ ಜನನ ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನ ನಡೆಯುತ್ತಿದೆ. ಅಚ್ಚರಿ ಎನಿಸಿದ್ರೂ ಇದು ಸತ್ಯ. ಜನನ ಪ್ರಮಾಣವನ್ನು ಹೆಚ್ಚಿಸಲು ಚೀನಾದ ನಗರವೊಂದರಲ್ಲಿ ವಿಶೇಷ ಕಾರ್ಯಕ್ರಮ ಶುರುವಾಗಿದೆ.
ಚೀನಾದ ಸಿಚುವಾನ್ ನೈರುತ್ಯ ಪ್ರಾಂತ್ಯದ ಪಂಜುಹುವಾ ನಗರದ ಸ್ಥಳೀಯ ಸರ್ಕಾರ, ಪ್ರತಿ ಮಕ್ಕಳಿಗೆ 500 ಯುವಾನ್ ನೀಡುವುದಾಗಿ ಘೋಷಣೆ ಮಾಡಿದೆ. ಉಕ್ಕಿನ ಉದ್ಯಮಕ್ಕೆ ಹೆಸರುವಾಸಿಯಾದ 1.2 ಮಿಲಿಯನ್ ಜನಸಂಖ್ಯೆ ಹೊಂದಿರುವ ನಗರವು, ತಾಯಂದಿರಿಗೆ ಉಚಿತ ಹೆರಿಗೆ ಸೇವೆಗಳನ್ನು ಒದಗಿಸಲಿದೆ. ಕೆಲಸದ ಸ್ಥಳಗಳ ಬಳಿ ನರ್ಸರಿ ಶಾಲೆಗಳನ್ನು ಶುರು ಮಾಡಲಿದೆ. ಎಲ್ಲಾ ವಿವಾಹಿತ ದಂಪತಿಗೆ ಮೂರು ಮಕ್ಕಳನ್ನು ಹೊಂದಲು ಮೇ ತಿಂಗಳಲ್ಲಿ ಅನುಮತಿ ನೀಡಲಾಗಿತ್ತು.
ಚೀನಾ ಸರ್ಕಾರ, ಈ ತಿಂಗಳ ಆರಂಭದಲ್ಲಿ 2025 ರ ವೇಳೆಗೆ ಮಕ್ಕಳ ಜನನ, ಪಾಲನೆ ಮತ್ತು ಶಿಕ್ಷಣದ ವೆಚ್ಚಕ್ಕೆ ಸಹಾಯ ಮಾಡುವುದಾಗಿ ಪ್ರತಿಜ್ಞೆ ಮಾಡಿದೆ. ವರದಿಯ ಪ್ರಕಾರ, ಅರ್ಹ ಉನ್ನತ ಸಂಶೋಧಕರು, ಶಿಕ್ಷಕರು, ವೈದ್ಯಕೀಯ ವೃತ್ತಿಪರರು ಈ ನಗರದಲ್ಲಿ ನೆಲೆಸಿದ್ರೆ ಅವರಿಗೆ ನಗದು ಬೋನಸ್ ನೀಡಲಿದೆ. ಕಳೆದ ವರ್ಷ ಚೀನಾದಲ್ಲಿ ಜನನ ಪ್ರಮಾಣ ಕುಸಿದಿದೆ. ಇದು ಆರು ದಶಕಗಳಲ್ಲಿ ಮೊದಲ ಬಾರಿ ಈ ಇಳಿಕೆ ಕಂಡು ಬಂದಿದೆ. 2025ರ ವೇಳೆಗೆ ಜನಸಂಖ್ಯೆ ಮತ್ತಷ್ಟು ಇಳಿಯಲಿದೆ ಎಂದು ಅಂದಾಜಿಸಲಾಗಿದೆ. ವಿಶ್ವದಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಕೆಲ ವರ್ಷ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿಗೆ ಬಂದಿತ್ತು. ಆಗ ಜನನ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿತ್ತು. ಈಗ ಮತ್ತೆ ಜನನ ಪ್ರಮಾಣ ಹೆಚ್ಚಿಸಲು ಸರ್ಕಾರ ಮುಂದಾಗಿದೆ.