ಈಗಾಗಲೇ ಕೋವಿಡ್-19 ಸಾಂಕ್ರಾಮಿಕದ ಜನಕ ಎಂಬ ಕುಖ್ಯಾತಿಗೆ ಗುರಿಯಾಗಿರುವ ಚೀನಾಕ್ಕೆ ಮತ್ತೊಮ್ಮೆ ಕೊರೊನಾ ಸ್ಫೋಟಕ್ಕೆ ಮೂಲ ಎನಿಸಿಕೊಳ್ಳುವುದು ಬೇಡವಾಗಿದೆ.
ತನ್ನ ಆರ್ಥಿಕತೆ ಬೆಳವಣಿಗೆ, ವಿದೇಶಾಂಗ ನೀತಿಗಳು, ಜನರು-ವಿದ್ಯಾರ್ಥಿಗಳ ವಿದೇಶ ಪ್ರವಾಸಕ್ಕೆ ಕೊರೊನಾದಿಂದ ಭಾರಿ ಅಪಾಯ ಎದುರಾಗುವುದನ್ನು ’ಡ್ರ್ಯಾಗನ್ ದೇಶ ’ ಮನಗಂಡಿದೆ.
ಹಾಗಾಗಿಯೇ ತನ್ನ ಈಶಾನ್ಯ ಭಾಗದ ಪ್ರಮುಖ ಕೈಗಾರಿಕಾ ಕೇಂದ್ರ ಎನಿಸಿರುವ ’ಹಾರ್ಬಿನ್’ ನಗರವನ್ನು ಕೂಡಲೇ ಶಟ್ಡೌನ್ ಮಾಡಿಸಿದೆ. ಅದು ಕೂಡ ಕೇವಲ ಒಂದೇ ಒಂದು ಕೋವಿಡ್-19 ಸೋಂಕಿನ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಖಡಕ್ ಕ್ರಮ ಜರುಗಿಸಲಾಗಿದೆ.
ಮನೆಯಲ್ಲಿರುವ ಎಲ್ಲ ಮಕ್ಕಳಿಗೂ ಸಿಗಲಿದೆ ಹಣ..!
ಸಮುದಾಯ ಪ್ರಸರಣ ಶುರುವಾಗುವುದನ್ನು ತಡೆಯಲು ಮುಂದಾಗಿರುವ ಚೀನಾ ಸರ್ಕಾರವು ನಗರದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಪೂರ್ಣ ನಿರ್ಬಂಧ ಹೇರಿದೆ. ಸಲೂನ್ಗಳನ್ನು 15 ದಿನಗಳ ಕಾಲ ತೆರೆಯದಂತೆ ಆದೇಶಿಸಲಾಗಿದೆ. ಪ್ರಮುಖವಾಗಿ, ವೃದ್ಧಾಶ್ರಮಗಳಲ್ಲಿ ಯಾರೂ ಕೂಡ ಭೇಟಿ ನೀಡದಂತೆ ತಡೆಹಿಡಿಯಲಾಗಿದೆ.
ಅ.1 ರಿಂದ ಚೀನಾದಲ್ಲಿ ಒಂದು ವಾರಗಳ ಕಾಲದ ರಾಷ್ಟ್ರೀಯ ದಿನ ಗೋಲ್ಡನ್ ವೀಕ್ ರಜೆಗಳು ಆರಂಭವಾಗಲಿವೆ. ಇದರಿಂದಾಗಿ ಜನರು ಪ್ರವಾಸ, ಸಂಬಂಧಿಕರ ಭೇಟಿಗೆ ಮುಂದಾಗುವ ಕಾರಣ ಕೊರೊನಾ ಪ್ರಸರಣ ವೇಗವಾಗುವ ಭೀತಿಯನ್ನು ಆರೋಗ್ಯ ಇಲಾಖೆ ವ್ಯಕ್ತಪಡಿಸಿದೆ. ಹಾಗಾಗಿ ಹಾರ್ಬಿನ್ ಸುತ್ತಲಿನ ನಗರಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಲಾಗಿದೆ.
ಸೆ. 20ರಂದು ಚೀನಾದಲ್ಲಿ 72 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದ್ದು ಖಾತ್ರಿಯಾಗಿತ್ತು. ಮುಖ್ಯವಾಗಿ ಆಗ್ನೇಯ ಭಾಗದ ಫುಜಿಯಾನ್ ಪ್ರಾಂತ್ಯದಲ್ಲಿ ಕೊರೊನಾದ ಸಾಮುದಾಯಿಕ ಪ್ರಸರಣ ವೇಗ ಪಡೆಯುತ್ತಿರುವುದನ್ನು ಚೀನಾ ಸರ್ಕಾರ ಗುರುತಿಸಿದೆ. ಕೊರೊನಾ ಹೊಸ ಮತ್ತು ಪ್ರಬಲ ರೂಪಾಂತರಿ ’ಡೆಲ್ಟಾ’ ಸ್ಫೋಟವನ್ನು ಜುಲೈ ಅಂತ್ಯದಲ್ಲಿ ಚೀನಾ ಹತ್ತಿಕ್ಕಿತ್ತು.