ಬೀಜಿಂಗ್: ಚೀನಾದಲ್ಲಿ ಜನಸಂಖ್ಯೆ ಮತ್ತೆ ಕುಸಿತ ಕಂಡಿದ್ದು, ಸತತವಾಗಿ 5ನೇ ವರ್ಷವೂ ಕುಂಠಿತವಾಗಿದೆ. 2021ರಲ್ಲಿ ಚೀನಾದಲ್ಲಿ ಡಿಸೆಂಬರ್ ಕೊನೆಗೆ 141.26 ಕೋಟಿ ಜನಸಂಖ್ಯೆ ಇದೆ. ಅಲ್ಲದೇ, ಅಲ್ಲಿ 2020ರಲ್ಲಿ 141.20 ಕೋಟಿಯಷ್ಟು ಜನಸಂಖ್ಯೆ ಇತ್ತು. ಸತತವಾಗಿ ಕಳೆದ 5 ವರ್ಷಗಳಿಂದ ಜನಸಂಖ್ಯೆ ಕುಸಿತ ಕಾಣುತ್ತಿದೆ.
ಚೀನಾದ ರಾಷ್ಟ್ರೀಯ ಅಂಕಿ- ಅಂಶದ ವರದಿಯಂತೆ ಒಂದು ವರ್ಷದಲ್ಲಿ 4.80 ಲಕ್ಷದಷ್ಟು ಮಾತ್ರ ಜನಸಂಖ್ಯೆ ಹೆಚ್ಚಳವಾಗಿದೆ. 2020ರಲ್ಲಿ ಜನನ ಪ್ರಮಾಣ 1.20 ಕೋಟಿಯಷ್ಟು ದಾಖಲಾಗಿದ್ದರೆ, 2021ರಲ್ಲಿ 1.06 ಕೋಟಿಯಷ್ಟು ದಾಖಲಾಗಿದೆ.
ಹೀಗಾಗಿ ಅವಲಂಬಿತರ ಹಾಗೂ ದುಡಿಯುವ ವರ್ಗದ ಜನರ ನಡುವಿನ ಅನುಪಾತದಲ್ಲಿ ವ್ಯತ್ಯಾಸವಾಗಿ ಆರ್ಥಿಕತೆಗೆ ಹಿನ್ನಡೆಯಾಗುತ್ತಿದೆ ಎನ್ನಲಾಗುತ್ತಿದೆ. ಚೀನಾದಲ್ಲಿ ಸದ್ಯ 26.4 ಕೋಟಿಯಷ್ಟು 60 ವರ್ಷ ಮೇಲ್ಪಟ್ಟ ಜನರಿದ್ದಾರೆ.
2016ರಿಂದ ಹಿಂದಿನ ವರ್ಷಗಳಲ್ಲಿ ಚೀನಾದಲ್ಲಿ ಜನಸಂಖ್ಯೆ ನಿಯಂತ್ರಿಸಲು ಒಂದು ಮಗು ಸಾಕು ಎಂಬ ನೀತಿ ಘೋಷಿಸಲಾಗಿತ್ತು. ಇದರಿಂದಾಗಿಯೇ ಅಲ್ಲಿ ಜನಸಂಖ್ಯೆ ಸಮಸ್ಯೆ ತಲೆದೋರಿದೆ ಎನ್ನಲಾಗುತ್ತಿದೆ. ಈಗ ಅಲ್ಲಿ ಎರಡು ಮಕ್ಕಳನ್ನು ಹೆರುವುದಕ್ಕೆ ಅವಕಾಶ ನೀಡಲಾಗಿದೆ.
ಅಲ್ಲದೇ, ಅಲ್ಲಿನ ಕೆಲವು ಪ್ರದೇಶಗಳಲ್ಲಿ ಮೂರು ಮಕ್ಕಳನ್ನು ಹೆರುವುದಕ್ಕಾಗಿ ಕೂಡ ದಂಪತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಬಾಣಂತನ ರಜೆ, ಮದುವೆ ರಜೆ ಸೇರಿದಂತೆ ಹಲವು ರಜೆ ನೀಡುವ ವಿಧಾನ ಜಾರಿಗೊಳಿಸಲಾಗುತ್ತಿದೆ.