ಚೀನಾದಲ್ಲಿ ಡ್ರ್ಯಾಗನ್ ಹಣ್ಣುಗಳಲ್ಲಿ ಕೊರೊನಾ ವೈರಸ್ ಕಂಡು ಬಂದಿರುವ ವಿಷಯ ಬಹಿರಂಗವಾಗಿದ್ದು, ಆತಂಕ ಮನೆ ಮಾಡುತ್ತಿದೆ.
ವಿಯೆಟ್ನಾಂನಿಂದ ಆಮದು ಮಾಡಿಕೊಂಡಿದ್ದ ಈ ಡ್ರ್ಯಾಗನ್ ಹಣ್ಣುಗಳಲ್ಲಿಯೇ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಅಲ್ಲದೇ, ಆಮದು ಮಾಡಿಕೊಂಡಿರುವ ಹಣ್ಣು ಹಾಗೂ ಆಹಾರ ಉತ್ಪನ್ನಗಳನ್ನು ಚೀನಾದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಸದ್ಯ ಹಣ್ಣು ಅಥವಾ ಆಹಾರ ಉತ್ಪನ್ನಗಳ ಮೂಲಕ ಕೊರೊನಾ ಬಂದಿರುವ ಕುರಿತು ಯಾವುದೆ ಸಾಕ್ಷ್ಯಗಳು ಇಲ್ಲದಿರುವುದರಿಂದಾಗಿ ಹಣ್ಣುಗಳನ್ನು ಆಮದು ಮಾಡಿಕೊಂಡಿರುವ ವ್ಯಾಪಾರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಅಲ್ಲದೇ, ಈ ಹಣ್ಣು ಮಾರಾಟ ಮಾಡುತ್ತಿದ್ದ ಸೂಪರ್ ಮಾರುಕಟ್ಟೆಗಳನ್ನು ಕೂಡ ಬಂದ್ ಮಾಡಲಾಗಿದೆ. ಚೀನಾದಲ್ಲಿನ 9 ನಗರಗಳಲ್ಲಿ ಈ ಹಣ್ಣುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಡಿಸೆಂಬರ್ ತಿಂಗಳಲ್ಲಿಯೇ ಈ ಹಣ್ಣುಗಳಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿವೆ ಎನ್ನಲಾಗಿದ್ದು, ಸದ್ಯ ಚೀನಾದಲ್ಲಿ ಈ ಹಣ್ಣುಗಳನ್ನು ನಿಷೇಧ ಮಾಡಲಾಗಿದೆ.
ವ್ಯಾಪಾರಿಗಳು ಈ ಹಣ್ಣುಗಳನ್ನು ಮುಟ್ಟಿದ್ದಕ್ಕೆ ಸೋಂಕಿನ ಲಕ್ಷಣಗಳು ಅವುಗಳಲ್ಲಿ ಕಾಣಿಸಿಕೊಂಡಿದೆಯೋ? ಅಥಾವಾ ಇನ್ನಾವುದೋ ಕಾರಣಕ್ಕೆ ವೈರಸ್ ನ ಲಕ್ಷಣ ಕಂಡು ಬಂದಿವೆಯೋ? ತಿಳಿಯದಾಗಿದ್ದು, ಸದ್ಯ ತಜ್ಞರು ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.