ವಿವಾಹಿತರು ಇಬ್ಬರು ಮಕ್ಕಳನ್ನ ಪಡೆಯಬಹುದು ಎಂಬ ನಿಯಮವನ್ನ ಹೊಂದಿದ್ದ ಚೀನಾ ಸರ್ಕಾರ ಇದೀಗ ತನ್ನ ನಿಯಮದಲ್ಲಿ ಬದಲಾವಣೆ ತಂದಿದ್ದು ದಂಪತಿಗೆ ಮೂವರು ಮಕ್ಕಳನ್ನ ಹೊಂದಲು ಅವಕಾಶ ನೀಡಿದೆ.
ವಿಶ್ವದಲ್ಲೆ ಅತೀ ಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ರಾಷ್ಟ್ರದಲ್ಲಿ ಜನನ ಪ್ರಮಾಣದಲ್ಲಿ ಭಾರೀ ಕುಸಿತ ಕಂಡು ಬಂದಿರೋದು ಗಮನಕ್ಕೆ ಬಂದ ಬಳಿಕ ಈ ನಿರ್ಧಾರವನ್ನ ಚೀನಾ ಸರ್ಕಾರ ಕೈಗೊಂಡಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ಬದಲಾವಣೆಗೆ ಅನುಮೋದನೆ ನೀಡಲಾಗಿದೆ ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ಜನಸಂಖ್ಯಾ ಸ್ಫೋಟವನ್ನ ನಿಯಂತ್ರಣಕ್ಕೆ ತರಲು ದಶಕಗಳಿಗಿಂತಲೂ ಹೆಚ್ಚು ಕಾಲ ಚೀನಾದಲ್ಲಿ ಜಾರಿಯಲ್ಲಿದ್ದ ಒಂದು ಮಕ್ಕಳ ನೀತಿಗೆ 2016ರಲ್ಲಿ ಅಂತ್ಯ ಹಾಡಿದ್ದ ಚೀನಾ ಸರ್ಕಾರ 2 ಮಕ್ಕಳನ್ನ ಹೊಂದಲು ಅವಕಾಶ ನೀಡಿತ್ತು.
ಇದೀಗ ದೇಶದಲ್ಲಿ ಕಡಿಮೆಯಾಗುತ್ತಿರುವ ಜನನ ಪ್ರಮಾಣವನ್ನ ಏರಿಕೆ ಮಾಡಲು ಹಾಗೂ ಹೆಚ್ಚುತ್ತಿರುವ ವೃದ್ಧರ ಸಂಖ್ಯೆಯನ್ನ ಸರಿದೂಗಿಸುವ ಸಲುವಾಗಿ ಚೀನಾ ಸರ್ಕಾರ ತನ್ನ ಕುಟುಂಬ ಯೋಜನಾ ನೀತಿಯಲ್ಲಿ ಈ ಮಹತ್ವದ ಬದಲಾವಣೆಯನ್ನ ಮಾಡಿದೆ.
ಆದರೆ ಈ ಮಹತ್ವದ ಬದಲಾವಣೆಯು ಯಾವಾಗ ಜಾರಿಗೆ ಬರಲಿದೆ ಅನ್ನೋದಕ್ಕೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.