ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಚೀನಾ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ) ಪ್ರದೇಶದಿಂದ 10 ಸಾವಿರ ಸೈನಿಕರನ್ನು ಹಿಂಪಡೆದುಕೊಂಡಿದೆ.
ಲಡಾಖ್ ನ ಭಾರತೀಯ ಗಡಿ ಪ್ರದೇಶಕ್ಕೆ ಸಮೀಪವಿರುವ ಚೀನಾ ಸೈನ್ಯದ ಸಾಂಪ್ರದಾಯಿಕ ತರಬೇತಿ ಪ್ರದೇಶಗಳಲ್ಲಿ ಇದ್ದ 10 ಸಾವಿರ ಸೈನಿಕರನ್ನು ಹಿಂಪಡೆದುಕೊಂಡಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಇಡೀ ಜಗತ್ತು ಹೋರಾಟ ನಡೆಸುತ್ತಿದ್ದಾಗ ಚೀನಾ 50 ಸಾವಿರ ಸೈನಿಕರನ್ನು ಭಾರತದ ಗಡಿಯಲ್ಲಿ ನಿಯೋಜಿಸಿತ್ತು. ಭಾರತದ ಕಡೆಯಿಂದ 200 ಕಿಲೋಮೀಟರ್ ದೂರದ ಪ್ರದೇಶಗಳಿಂದ ಈಗ ಸೈನಿಕರನ್ನು ಹಿಂಪಡೆದುಕೊಳ್ಳಲಾಗಿದೆ. ತೀವ್ರವಾದ ಚಳಿ ಮತ್ತು ನಿರ್ವಹಣೆ ತೊಂದರೆಯಿಂದಾಗಿ ಸೈನಿಕರನ್ನು ಹಿಂಪಡೆಯಲಾಗಿದೆ.
ಭಾರತ ಕೂಡ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಯೋಧರನ್ನು ನಿಯೋಜಿಸಿದೆ. ಲಡಾಖ್ ಪ್ರದೇಶದಲ್ಲಿ ಚೀನಾ ಸೈನ್ಯದ ಯಾವುದೇ ದುಷ್ಕೃತ್ಯವನ್ನು ಎದುರಿಸಲು ಭಾರತ ಹೆಚ್ಚಿನ ಸಂಖ್ಯೆಯ ಯೋಧರನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ. ಗಾಲ್ವನ್ ಕಣಿವೆ ಸಂಘರ್ಷದ ನಂತರ ಎಲ್ಎಸಿ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಇದಾದ ಬಳಿಕ ಹೆಚ್ಚಿನ ಸೈನಿಕರನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಚೀನಾ 50 ಸಾವಿರ ಸೈನಿಕರಲ್ಲಿ 10 ಸಾವಿರ ಮಂದಿಯನ್ನು ಹಿಂಪಡೆದುಕೊಂಡಿದೆ.