ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಪ್ರಸ್ತುತ ರಾಜಸ್ಥಾನದಲ್ಲಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚೀನಾ ಯುದ್ಧಕ್ಕೆ ಸಿದ್ಧವಾಗುತ್ತಿದ್ದಂತೆ ಕೇಂದ್ರವು ನಿದ್ದೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಚೀನಾ ಪೂರ್ಣ ಪ್ರಮಾಣದ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಬೆದರಿಕೆ ಸ್ಪಷ್ಟವಾಗಿದೆ. ಆದರೆ, ನಮ್ಮ ಸರ್ಕಾರವು ಬೆದರಿಕೆಯನ್ನು ನಿರ್ಲಕ್ಷಿಸುತ್ತಿದೆ. ಕೇಂದ್ರವು ನಮ್ಮಿಂದ ಸತ್ಯಗಳನ್ನು ಮರೆಮಾಡಲು ಪ್ರಯತ್ನಿಸುತ್ತಿದೆ. ಆದರೆ ಅಂತಹ ವಿಷಯಗಳನ್ನು ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಚೀನಾ ಬಗ್ಗೆ ಎಚ್ಚರಿಕೆ ವಹಿಸುವಂತೆ ನಾನು ಈ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇನೆ. ಚೀನಾದ ಮಾದರಿಯನ್ನು ನೋಡಿ. ಅವರು ಲಡಾಕ್ ಮತ್ತು ಅರುಣಾಚಲದ ಕಡೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಆದರೆ ಭಾರತ ಸರ್ಕಾರವು ನಿದ್ದೆ ಮಾಡುತ್ತಿದೆ ಎಂದು ದೂರಿದ್ದಾರೆ.
ತವಾಂಗ್ ಸೆಕ್ಟರ್ ಬಳಿಯ ಯಾಂಗ್‌ಸ್ಟೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವಿನ ಘರ್ಷಣೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ಹೇಳಿಕೆಗಳು ಬಂದಿವೆ.