ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂದು ಹೆಸರು ಮಾಡಿರುವ ಚೀನಾದಲ್ಲಿ 60 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜನಸಂಖ್ಯೆಯಲ್ಲಿ ಕುಸಿತ ಕಂಡಿದೆ. ಕೋವಿಡ್ ಸೇರಿದಂತೆ ಹಲವು ಸವಾಲುಗಳನ್ನು ಚೀನಾ ಎದುರಿಸುತ್ತಿರುವ ಕಾರಣ ಈ ರೀತಿಯಾಗಿದೆ ಎಂದು ಹೇಳಲಾಗಿದೆ.
2022ರ ವರ್ಷಾಂತ್ಯದ ವೇಳೆಗೆ ಚೀನಾದ ಜನಸಂಖ್ಯೆ 1,411.75 ಮಿಲಿಯನ್ ಎಂದು ಬೀಜಿಂಗ್ ನ ರಾಷ್ಟ್ರೀಯ ಸಾಂಖ್ಯಿಕ ಇಲಾಖೆ ಅಂಕಿ ಅಂಶ ನೀಡಿದೆ. ಈ ಮೂಲಕ ಜನಸಂಖ್ಯೆಯಲ್ಲಿ ಶೇ.0.85 ರಷ್ಟು ಇಳಿಕೆಯಾದಂತಾಗಿದೆ.
ಈ ಹಿಂದೆ 1960ರಲ್ಲಿ ಚೀನಾದ ಜನಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು, ಅದಾದ 60 ವರ್ಷಗಳ ಬಳಿಕ ಈಗ ಮತ್ತೆ ಇಳಿಕೆ ಕಂಡು ಬಂದಿದೆ. 1960ರಲ್ಲಿ ಚೀನಾ ಕಂಡರಿಯದಂತಹ ಬರ ಪರಿಸ್ಥಿತಿಯನ್ನು ಎದುರಿಸಿದ್ದು, ಇದರಿಂದಾಗಿ ಜನಸಂಖ್ಯೆಯಲ್ಲಿ ಇಳಿಕೆಯಾಗಿತ್ತು.
ಚೀನಾದಲ್ಲಿ ಈ ಮೊದಲು ಜನಸಂಖ್ಯೆ ಅತ್ಯಂತ ವೇಗದಲ್ಲಿ ಏರಿಕೆಯಾಗಿದ್ದ ಕಾರಣ 1980 ರಲ್ಲಿ ‘ಒಂದೇ ಮಗು’ ನೀತಿಯನ್ನು ಜಾರಿಗೆ ತರಲಾಗಿತ್ತು. ಆದರೆ 2016 ಹಾಗೂ 2021 ರಲ್ಲಿ ದಂಪತಿ, ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಲಾಗಿದ್ದು, ಆದರೂ ಸಹ ಜನಸಂಖ್ಯೆಯಲ್ಲಿ ಇಳಿಕೆಯಾಗಿದೆ.